ADVERTISEMENT

ಮೂಲೆ ಸೇರಿದ  ಒರಳಕಲ್ಲು, ರಾಗಿ  ಬೀಸುವ  ಕಲ್ಲು: ಅಪ್ಪಗೆರೆ ತಿಮ್ಮರಾಜು

ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 15:59 IST
Last Updated 31 ಮಾರ್ಚ್ 2022, 15:59 IST
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ದೇವಾನಂದ ವರಪ್ರಸಾದ್‌, ಸೀ.ಚ.ಯತೀಶ್ವರ್‌, ಬನುಮ ಗುರುದತ್‌ ಇದ್ದಾರೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ದೇವಾನಂದ ವರಪ್ರಸಾದ್‌, ಸೀ.ಚ.ಯತೀಶ್ವರ್‌, ಬನುಮ ಗುರುದತ್‌ ಇದ್ದಾರೆ   

ಬೂವನಹಳ್ಳಿ (ಚನ್ನವೀರ ಕಣವಿ ವೇದಿಕೆ): ‘ಮಕ್ಕಳ ಬಾಯಲ್ಲಿ ಜನಪದ ಗೀತೆಗಳನ್ನು ಹಾಡಿಸದಿದ್ದರೆ ಜನಪದ ಸಂಸ್ಕೃತಿಯೇ ಸತ್ತು ಹೋಗುತ್ತದೆ’ ಎಂದುಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.

ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜನಪದ ಗೀತೆ ಗಾಯನ ಮತ್ತು ವಿಶ್ಲೇಷಣೆ’ ಎಂಬ ವಿಷಯ ಕುರಿತ ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಇಂದು ಒರಳಕಲ್ಲು, ರಾಗಿ ಬೀಸುವ ಕಲ್ಲು ಮೂಲೆಗೆ ಬಿದ್ದಿವೆ. ಅದರಂತೆಯೇ ಜನಪದವೂ ಬಾಯಿಂದ ಬಾಯಿಗೆ ಬರುವುದು ನಿಂತುಹೋಗಿವೆ. ಬದಲಾಗಿ ಹಾಡುಗಳು ಯುಟ್ಯೂಬ್‌ನಲ್ಲಿ ಬರುತ್ತಿವೆ’ ಎಂದರು.

‘ಇಂದಿನ ಪೀಳಿಗೆಗೆ ಜನಪದದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಹಿಂದೆ ಯಾವುದೇ ಹಿಮ್ಮೇಳ, ಧ್ವನಿವರ್ಧಕ ಇಲ್ಲದೇ ಜನಪದ ಗೀತೆಗಳ ಗಾಯನ ಮಾಡಲಾಗುತ್ತಿತ್ತು’ ಎಂದು ಹೇಳಿದರು.

ADVERTISEMENT

ಚಿಂತಕ ಡಾ.ಗುರುಬಸವರಾಜ್‌ ಯಲಗಚ್ಚಿನವರ್‌ ಮಾತನಾಡಿ, ‘ಜನಪದದಲ್ಲಿ ಕತೆ, ಹಾಡು, ಸೋಬಾನೆ, ತ್ರಿಪದಿ ಹೀಗೆ ಸಾಕಷ್ಟು ಪ್ರಕಾರಗಳನ್ನು ನೋಡಬಹುದು. ಜನಪದ ಸಾಹಿತ್ಯಕ್ಕೆ ಕೊಡುಗೆ ನೀಡಿದವರು ಅನಕ್ಷರಸ್ಥರು. ಅಕ್ಷರ ಕಲಿಯದಿದ್ದರೂ ಜೀವನ ಶಾಲೆಯಲ್ಲಿ ಸಾಕಷ್ಟು ಅನುಭವ ಪಡೆದ ಜನಪದರು ಪದಗಳನ್ನು ಕಟ್ಟಿದ್ದಾರೆ’ ಎಂದು ತಿಳಿಸಿದರು.

ಎವಿಕೆ ಕಾಲೇಜಿನ ಕನ್ನಡ ಉಪನ್ಯಾಸಕ ಸೀ.ಚ.ಯತೀಶ್ವರ್‌ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ಕಲಿತವರು ಮಾಡಲಾಗದ ಕೆಲಸವನ್ನು
ಜನಪದರು ಮಾಡಿದ್ದಾರೆ. ಜನಪದ ಹಾಡುಗಳಲ್ಲಿ ಮಂಟೇಸ್ವಾಮಿ ಹಾಗೂ ಮಾದೇಶ್ವರನ ಕುರಿತ ಗೀತೆಗಳು ಕೂಡ ಪ್ರಮುಖವಾದವು’ ಎಂದರು.

ಗಾಯಕ ದೇವಾನಂದ ವರಪ್ರಸಾದ್‌ ಅವರು ಮಂಟೇಸ್ವಾಮಿ ಕುರಿತ ಹಾಡು ಹಾಡಿದರು. ಗಾಯಕಿ ಬನುಮ ಗುರುದತ್‌ ಅವರು, ‘ನೀನು ಮೆಚ್ಚಿ ಮದುವೆ ಆಗುವ ಗಂಡ ಯಂತವನಿರಬೇಕವ್ವ.., ಆಡಿ ಬಾ ಎನಕಂದ ಅಂಗಾಲ ತೊಳೆದೇನು..’ ಎಂಬ ಗೀತೆಗಳನ್ನು ಹಾಡಿದರು.

ಬನುಮ ಗುರುದತ್ತ ಅವರ ಹಾಡುಗಳ ವಿಶ್ಲೇಷಣೆ ಮಾಡಿದ ಶಿಕ್ಷಕ ಬಿ.ಡಿ. ಶಂಕರೇಗೌಡ, ‘ಜನಪದ ಗೀತೆಗಳು ಕರುಳಿನಿಂದ ಬಂದಿವೆ. ಅವು ಅಭಿನಯದ ಗೀತೆಗಳಲ್ಲ, ಅನುಭವದ ಗೀತೆಗಳು. ಉತ್ತರ ಕರ್ನಾಟಕ ಭಾಗದಲ್ಲಿ ಮೂಡಿಬರುವ ಜವಾರಿ ಗೀತೆಗಳು ಜನ
ಪ್ರಿಯವಾಗುತ್ತಿವೆ. ಆ ಹಾಡುಗಳು ಸಾಹಿತ್ಯಕ್ಕಿಂತ ಹಿನ್ನೆಲೆ ಸಂಗೀತವೇ ಹೆಚ್ಚಿರುತ್ತಿದೆ. ಜನಪದ ಗೀತೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ’ ಎಂದರು.

ಗಾಯಕ ಕುಮಾರ್ ಕಟ್ಟೆಬೆಳಗುಲಿ ಭಕ್ತಿ ಪ್ರಧಾನ ಜನಪದ ಗೀತೆ ಹಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಲ್. ಮಲ್ಲೇಶಗೌಡ ಮಾತನಾಡಿ, ‘ಜನಪದರು ನುಡಿದಂತೆಯೇ ನಡೆಯುತ್ತಿದ್ದರು. ಇಂದು ಇತಿಹಾಸಕಾರರು ಕಟ್ಟಿಕೊಡಲಾಗದ ಸನ್ನಿವೇಶಗಳನ್ನು ಜನಪದರು ಲಾವಣಿಗಳ ಮೂಲಕಕಟ್ಟಿಕೊಟ್ಟಿದ್ದಾರೆ. ದೇವರನ್ನು ಹೊಗಳುತ್ತಲೇ ಆತನ ಹುಳುಕುಗಳನ್ನುಎತ್ತಿಹಿಡಿಯುತ್ತಿದ್ದರು’ ಎಂದು ವಿವರಿಸಿದರು.

ಜನಪದ ಕಲಾವಿದರು ಜನಪದ ಗೀತೆಗಳ ರಸದೌತಣ ಉಣಬಡಿಸಿದರು.ಬೂವನಹಳ್ಳಿಯ ತಾಯಮ್ಮ ಮತ್ತು ತಂಡದ ಸೋಬಾನೆ ಪದಗಳು ಪ್ರೇಕ್ಷಕರಿಗೆಮೆಚ್ಚುಗೆ ಗಳಿಸಿತು. ಡೊಳ್ಳು ಕುಣಿತಕ್ಕೆ ನೆರೆದಿದ್ದ ಜನರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಸರ್ವಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ, ಹಾಸನಾಂಬ ಬಿ.ಇಡಿ ಕಾಲೇಜುಪ್ರಾಂಶುಪಾಲ ಎಚ್.ಎಸ್. ಪ್ರಕಾಶ್ ಇದ್ದರು. ಶಿಕ್ಷಕಿ ವನಜಾಕ್ಷಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.