ADVERTISEMENT

ಕಾರ್ಗಿಲ್ ವಿಜಯ ದಿವಸ್ | ಸೇನೆ ಶೌರ್ಯಕ್ಕೆ ಆಪರೇಷನ್‌ ಸಿಂಧೂರ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:03 IST
Last Updated 27 ಜುಲೈ 2025, 4:03 IST
ಹಾಸನದ ಕಾರ್ಯಪ್ಪ ಪಾರ್ಕ್‌ನಲ್ಲಿ ಶನಿವಾರ ಹುತಾತ್ಮ ಯೋಧರ ಸ್ಮಾರಕಕ್ಕೆ ಶಾಸಕ ಸ್ವರೂಪ್‌ ಪ್ರಕಾಶ್‌ ಗೌರವ ಸಲ್ಲಿಸಿದರು
ಹಾಸನದ ಕಾರ್ಯಪ್ಪ ಪಾರ್ಕ್‌ನಲ್ಲಿ ಶನಿವಾರ ಹುತಾತ್ಮ ಯೋಧರ ಸ್ಮಾರಕಕ್ಕೆ ಶಾಸಕ ಸ್ವರೂಪ್‌ ಪ್ರಕಾಶ್‌ ಗೌರವ ಸಲ್ಲಿಸಿದರು   

ಹಾಸನ: ಪ್ರಪಂಚದ ಇತರೆ ದೇಶಕ್ಕೆ ಹೋಲಿಸಿದರೆ ಭಾರತವೂ ಸೈನ್ಯದ ಎಲ್ಲ ವಿಭಾಗಗಳಲ್ಲಿ ಸಶಕ್ತವಾಗಿದೆ ಎಂಬುದಕ್ಕೆ ಅಪರೇಷನ್ ಸಿಂಧೂರ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.

ನಗರದ ಕೆ.ಆರ್.ಪುರಂನ ಜನರಲ್ ಕಾರ್ಯಪ್ಪ ಪಾರ್ಕ್‌ನಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಗಿಲ್ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇಡೀ ವಿಶ್ವವೇ ತಿರುಗಿ ನೋಡುವ ಕೆಲಸವನ್ನು ಭಾರತೀಯ ಸೇನೆ, ಅಪರೇಷನ್ ಸಿಂಧೂರದ ಮೂಲಕ ಮಾಡಿ ತೋರಿಸಿದೆ. ಜಮ್ಮು ಕಾಶ್ಮೀರ, ಸಿಯಾಚಿನ್ ಸೇರಿದಂತೆ ಕಠಿಣ ವಾತಾವರಣದ ಭೂ ಭಾಗಗಳಲ್ಲಿ ಸೇನೆಯ ನಿಯೋಜನೆ ಸವಾಲಿನ ಕೆಲಸವಾಗಿದೆ. ಅಂತಹ ಪ್ರದೇಶದಲ್ಲಿಯೂ ಕೆಲಸ ಮಾಡಿ ದೇಶದ ರಕ್ಷಣೆಗೆ ಪಣ ತೊಟ್ಟಿರುವ ಸೈನಿಕರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ADVERTISEMENT

ಕಾರ್ಗಿಲ್ ವಿಜಯ ದಿವಸ ಒಂದು ನೆನಪಿನ ದಿನವಾಗಿದೆ. ಯುದ್ಧದಲ್ಲಿ ಜಯಶಾಲಿಗಳಾದ ಸಂತಸ ಒಂದೆಡೆಯಾದರೆ, ಇನ್ನೊಂದೆಡೆ ಯುದ್ಧದಲ್ಲಿ ವೀರ ಮರಣ ಅಪ್ಪಿದ ಸೈನಿಕರನ್ನು ಎಲ್ಲರೂ ಗೌರವಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಮಾಜಿ ಸೈನಿಕರಿದ್ದು, ಈ ಪೈಕಿ ಕೇವಲ 1,800 ಮಂದಿ ಮಾಜಿ ಸೈನಿಕರ ಸಂಘಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಎಲ್ಲರೂ ಸಂಘಕ್ಕೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಸ್ವರೂಪ್‌, ‘ದೇಶದ ಪ್ರತಿಯೊಬ್ಬ ಪ್ರಜೆಯು ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ವೃದ್ಧಿಸುತ್ತದೆ’ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸೈನಿಕರ ಸಂಘದ ವತಿಯಿಂದ ಗೌರವಧನ ನೀಡಲಾಯಿತು. ಮಾಜಿ ಸೈನಿಕರ ಸಂಘದ ಸದಸ್ಯರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಹಾಸನದ ಪಾಂಡಿತ್ಯ ಯುರೋ ಶಾಲೆಯಲ್ಲಿ ಕಾರ್ಗಿಲ್‌ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು

ಪಾಂಡಿತ್ಯ ಯುರೋ ಶಾಲೆಯಲ್ಲಿ ಆಚರಣೆ

ಹಾಸನ: ಇಲ್ಲಿನ ಬಸವೇಶ್ವರನಗರದ ಐ.ಸಿ.ಎಸ್‌.ಇ ಪಠ್ಯಕ್ರಮ ಆಧಾರಿತ ಪಾಂಡಿತ್ಯ ಯೂರೋ ಶಾಲೆಯಲ್ಲಿ ಕಾರ್ಗಿಲ್ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ನೃತ್ಯ ಪ್ರದರ್ಶನ ನಡೆಯಿತು. ಪ್ರಾಂಶುಪಾಲ ಡಾ.ವಿಶ್ವನಾಥ್ ಬಿ. ಕೋಳಿವಾಡ ಕಾರ್ಗಿಲ್ ವಿಜಯ ದಿನದ ಮಹತ್ವದ ಕುರಿತು ವಿವರಿಸಿದರು. ಉಪ ಪ್ರಾಂಶುಪಾಲ ಡಾ.ಸೆಬಾಸ್ಟಿಯನ್ ಟಿ.ಡಿ. ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.