ಹಾಸನ: ರಾಜ್ಯದಲ್ಲಿ ಮಾನವ-ಆನೆ ಸಂಘರ್ಷದ ಸಮಸ್ಯೆ ಪರಿಹರಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಚದರ ಕಿ.ಮೀ ವ್ಯಾಪ್ತಿಯಲ್ಲಿ ಆನೆ ಧಾಮ ಸ್ಥಾಪಿಸಲು ₹20 ಕೋಟಿ ಒದಗಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದಂತಾಗಿದೆ.
ಹಲವು ದಶಕಗಳಿಂದ ಆನೆ ಹಾವಳಿಯಿಂದ ಕಂಗೆಟ್ಟಿರುವ ಜಿಲ್ಲೆಯ ಜನರು ಆನೆ ಸಮಸ್ಯೆ ನಿವಾರಣೆಗೆ ಮುಂದಾಗುವಂತೆ ಇತ್ತೀಚೆಗೆ ಹಲವು ಪ್ರತಿಭಟನೆಗಳನ್ನು ನಡೆಸಿದ್ದರು. ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ, ಆನೆ ಧಾಮ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಅದಕ್ಕೆ ಪೂರಕವಾಗಿ ಇದೀಗ ಬಜೆಟ್‌ನಲ್ಲಿ ₹20 ಕೋಟಿ ಮೀಸಲಿಡಲಾಗಿದೆ.
ಮುಖ್ಯವಾಗಿ ವನ್ಯಪ್ರಾಣಿಗಳ ದಾಳಿಯಿಂದ ಸಂಭವಿಸುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರ ಧನವನ್ನು ₹15 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಾಡಾನೆ ಹಾಗೂ ಚಿರತೆ ಹಾವಳಿ ನಿಯಂತ್ರಿಸಲು ಈಗಾಗಲೇ 8 ಆನೆ ಕಾರ್ಯಪಡೆ ಹಾಗೂ 2 ಚಿರತೆ ಕಾರ್ಯಪಡೆ ರಚಿಸಿದ್ದು, ಪ್ರಸಕ್ತ ಸಾಲಿನಲ್ಲಿ ₹17 ಕೋಟಿ ಒದಗಿಸುವ ಮೂಲಕ ಕಾರ್ಯಯೋಜನೆ ಮುಂದುವರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾನವ-ಆನೆ ಸಂಘರ್ಷ ತಡೆಗಟ್ಟಲು 2015ರಿಂದ ಈವರೆಗೆ 392 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಇನ್ನೂ 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ 2025-26ನೇ ಸಾಲಿನಲ್ಲಿ ₹60 ಕೋಟಿ ರೂ. ಮೀಸಲಿರಿಸಲಾಗಿದೆ.
ಬಜೆಟ್‌ನಲ್ಲಿ ಜಿಲ್ಲೆಗೆ ಸಣ್ಣ ಸಮಾಧಾನ ಸಿಕ್ಕಿದೆ. ರೈಲ್ವೆ ಸಹಯೋಗದೊಂದಿಗೆ ಕೈಗೆತ್ತಿಕೊಂಡು ಪ್ರಗತಿಯಲ್ಲಿರುವ ಚಿಕ್ಕಮಗಳೂರು- ಬೇಲೂರು ಮತ್ತು ಬೇಲೂರು-ಹಾಸನ ಯೋಜನೆಗಳಿಗೆ ವೇಗ ನೀಡುವ ಭರವಸೆ ಸಿಕ್ಕಿದೆ.
ಕೆ-ಶಿಪ್-4 ಯೋಜನೆಯಡಿ ಮಡಿಕೇರಿ-ದೋಣಿಗಾಲ್ (ಎನ್-75) (ಮಾದಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗ) 95 ಕಿ.ಮೀ ಕಾಮಗಾರಿ ಹಾಗೂ ಶ್ರೀರಂಗಪಟ್ಟಣ (ಪಾಂಡವಪುರ ರೈಲ್ವೆ ನಿಲ್ದಾಣ)- ಬಿ.ಎಂ. ರೋಡ್ ಜಂಕ್ಷನ್ ಚನ್ನರಾಯಪಟ್ಟಣ (ಕೆ.ಆರ್.ಪೇಟೆ ಮಾರ್ಗ) 63 ಕಿ.ಮೀ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆ ಯೋಜನೆಗಳ ಅಡಿ ಚನ್ನರಾಯಪಟ್ಟಣದ ಅಮಾನಿ ಕೆರೆಯಿಂದ 25 ಕೆರೆಗಳ ತುಂಬಿಸುವ ಯೋಜನೆ ಪ್ರಸ್ತಾಪ ಆಗಿದೆ. ಯುನೆಸ್ಕೊ ವಿಶ್ವ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ಬೇಲೂರು-ಹಳೇಬೀಡು ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಳೆಗಾಲದಲ್ಲಿ ಭೂ ಕುಸಿತ ಸಂಭವಿಸುವ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಿಸುವ ಘೋಷಣೆಯಲ್ಲಿ ಹಾಸನ ಜಿಲ್ಲೆಯೂ ಸೇರಿದೆ. ಹಾಸನ ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ನೀಡುವ ವಾಗ್ದಾನ ಮಾಡಲಾಗಿದೆ.
ಐಟಿ–ಬಿಟಿಗೆ ಆದ್ಯತೆ
ಸಿರಿಧಾನ್ಯ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕ ಆಗಿದ್ದು ಸಿರಿಧಾನ್ಯ ಹಬ್ ಉತ್ತಮ ನಿರ್ಧಾರ. ಐಟಿ–ಬಿಟಿ ಹೊಸ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದು ಸಂತಸದ ವಿಷಯ. ಎಂಎಸ್‌ಎಂಇಗಳಿಗೆ ಉತ್ತೇಜನ ಕೊಡುವ ಕಾರ್ಯಕ್ರಮ ಸ್ವಾಗತಾರ್ಹ
ಎಚ್.ಎ. ಕಿರಣ್ ಕುಮಾರ್ ಎಫ್‌ಕೆಸಿಸಿಐ ನಿರ್ದೇಶಕ
ಸಮಗ್ರ ಅಭಿವೃದ್ಧಿ ಬಜೆಟ್
ಜಿಲ್ಲೆ ಬೇಲೂರು ಹಳೇಬೀಡು ಐತಿಹಾಸಿಕ ಸ್ಥಳದಲ್ಲಿ ಮೂಲಸೌಕರ್ಯ ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದೆ. ಆನೆ ಸಂಘರ್ಷದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ₹20 ಲಕ್ಷ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ₹1ಸಾವಿರ ಹೆಚ್ಚಿಗೆ ವೇತನ ನೀಡಲಾಗಿದೆ. ಆನೆಧಾಮ ನಿರ್ಮಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ಉತ್ತಮ ಬಜೆಟ್ ಮಂಡಿಸಿದ್ದಾರೆ.
ದೇವರಾಜೇಗೌಡ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ
ಕಾಂಗ್ರೆಸ್–ಬಿಜೆಪಿ ಎರಡೂ ಒಂದೇ
ಮಾದರಿ ಶಾಲೆಗಳ ಹೆಸರಿನಲ್ಲಿ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. 500 ಪಬ್ಲಿಕ್ ಶಾಲೆಗಳ ನಿರ್ಮಾಣ ಸ್ವಾಗತಾರ್ಹವಾಗಿದ್ದರೂ ಇರುವ ಶಾಲೆಗಳನ್ನು ಮುಚ್ಚಲು ಇದು ಸಮಜಾಯಿಷಿ ಅಲ್ಲ. ಎನ್‌ಈಪಿ ಮಾದರಿಯಲ್ಲೇ ‘ಸ್ಕಿಲ್ ಅಟ್ ಸ್ಕೂಲ್’ ಯೋಜನೆ ಘೋಷಿಸಿದೆ. ಯುಜಿಸಿ ಮಾರ್ಗಸೂಚಿಯಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಪ್ರೊಫೆಸರ್ ಆಫ್ ಪ್ರಾಕ್ಟಿಸ್’ ಜಾರಿಗೊಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂಬುದನ್ನು ಇದು ಸ್ಪಷ್ಟ ಪಡಿಸುತ್ತದೆ.
ಚೈತ್ರಾ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ
ಪ್ರಗತಿಗೆ ಅನುಕೂಲ
ಬಿಸಿಯೂಟ ಕಾರ್ಯಕರ್ತರಿಗೆ ₹1ಸಾವಿರ ಗೌರವಧನ ಹೆಚ್ಚಿಸಿರುವುದು ಸಂತಸದ ವಿಚಾರ. ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಅರಂಭಿಸಲು ಆದ್ಯತೆ ನೀಡಿರುವುದರಿಂದ ಶೈಕ್ಷಣಿಕ ಪ್ರಗತಿಗೆ ಅನುಕೂಲ ಆಗಲಿದೆ. ಬಜೆಟ್ ರೈತ ಪರವಾಗಿಯೂ ಇದೆ.
ತೀರ್ಥೇಶ್ ಮೊಬೈಲ್ ಅಂಗಡಿ ಮಾಲೀಕ
ಹಳೇಬೀಡು ಕೃಷಿಗೆ ಉತ್ತೇಜನ ಬೇಕಿತ್ತು
ಬಜೆಟ್ ನಲ್ಲಿ ಕೃಷಿಗೆ ಮತ್ತಷ್ಟು ಉತ್ತೇಜನ ದೊರಕಬೇಕಾಗಿತ್ತು. ತರಕಾರಿ ಬೆಳೆಯಲು ತಗುಲುವ ವೆಚ್ಚವನ್ನು ರೈತ ದುಡಿಯಲು ಸಾಧ್ಯವಾಗುತ್ತಿಲ್ಲ. ತರಕಾರಿಗೆ ನಿರ್ದಿಷ್ಟ ಬೆಲೆ ದೊರಕುವಂತೆ ಯೋಜನೆ ರೂಪಿಸಬೇಕಿತ್ತು.
ಎಚ್.ಎನ್.ಉಮೇಶ್ ರೈತ ಹಳೇಬೀಡು
ಸಮಾಧಾನಕರ ಬಜೆಟ್
ಕೃಷಿ ಮತ್ತು ನೀರಾವರಿಗೆ ಸ್ವಲ್ಪ ಪ್ರಾಧಾನ್ಯತೆ ನೀಡಿರುವುದು ಸಮಾಧಾನ ತಂದಿದೆ. ಕೆಪಿಎಸ್ ಶಾಲೆಗಳಿಗೆ ಹಣ ಮೀಸಲಿಟ್ಟ ಉದ್ದೇಶ ಒಳ್ಳೆಯ ಹೆಜ್ಜೆಯಾಗಿದೆ. ಜಾಗತಿಕವಾದ ಕೈಗಾರಿಕೆಗಳಿಗೆ ಮಹತ್ವ ನೀಡಿಲ್ಲ ಎಂಬುದು ಬೇಸರದ ಸಂಗತಿ. ಗ್ಯಾರಂಟಿಗಳನ್ನು ಉಳಿಸಿಕೊಂಡು ಕೂಡ ಉತ್ತಮ ಎನಿಸಬಹುದಾದ ಯೋಜನೆಗಳಿರುವುದು ಸಮಾಧಾನದ ಸಂಗತಿ.
ಮಹೇಶ್ ಹೊಡೆನೂರು ಅರಕಲಗೂಡು ಬಿಜಿಎಸ್ ಕಾಲೇಜು ಪ್ರಾಂಶುಪಾಲ
ಶಿಕ್ಷಣಕ್ಕೆ ಒತ್ತು
ಸಿದ್ದರಾಮಯ್ಯನವರ 16 ನೇ ಬಜೆಟ್‌ನಲ್ಲಿ ಶಿಕ್ಷಣಕ್ಕೆ ₹45286 ಕೋಟಿ ನೀಡಿರುವುದು ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮತ್ತು 50 ಪ್ರೌಢಶಾಲೆಗಳನ್ನು ಉನ್ನತೀಕರಣ 500 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿರುವುದು ಸಂತಸದ ಸಂಗತಿ.
ನಂದೀಶ ಯು.ಎಂ. ಅರಕಲಗೂಡು ಟೈಮ್ಸ್ ಪಿಯು ಕಾಲೇಜು ಉಪನ್ಯಾಸಕ
ಪ್ರತಿಪಕ್ಷಗಳಿಗೆ ತಕ್ಕ ಉತ್ತರ
ರಾಜ್ಯ ಬಜೆಟ್‌ನಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ₹51034 ಕೋಟಿ ಮೀಸಲಿಡಲಾಗಿದೆ. ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದೆ. ಕೃಷಿ ನೀರಾವರಿ ಆರೋಗ್ಯ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಆನೆ ಹಾವಳಿ ತಡೆಗಟ್ಟುವ ಬಗ್ಗೆಯೂ ಅನುದಾನ ಒದಗಿಸಲಾಗಿದೆ.
ಎಲ್.ಪಿ. ಪ್ರಕಾಶ್ ಗೌಡ ಚನ್ನರಾಯಪಟ್ಟಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ
ಎಲ್ಲ ವರ್ಗಗಳ ಅಭಿವೃದ್ಧಿಗೆ ಒತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಅನುಷ್ಠಾನಕ್ಕೆ ಹಣ ಮೀಸಲಿಡುವುದರ ಜೊತೆಗೆ ಬಡವರ ಹಾಗೂ ಮಧ್ಯಮ ವರ್ಗದವರ ಜೀವನೋಪಾಯಕ್ಕೆ ಒತ್ತು ನೀಡಿದ್ದಾರೆ. ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಜನಪರ ಬಜೆಟ್ ಮಂಡಿಸಿದ್ದಾರೆ.
ಕೆ.ಎಂ.ಶಿವಲಿಂಗೇಗೌಡ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಶಾಸಕ
ತುಷ್ಟೀಕರಣ ನೀತಿ
ರಾಜ್ಯದಲ್ಲಿ ಕೆಲವರ ತುಷ್ಟಿಕರಣಕ್ಕಾಗಿ ಒಲೈಕೆಗಾಗಿ ಬಜೆಟ್ ಮಂಡಿಸಿದ್ದು ನಿರಾಶದಾಯಕ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಮೀಸಲು ಇಡುವ ಮೂಲಕ ರಾಜ್ಯದ ಅಭಿವೃದ್ದಿಗಳಿಗೆ ಬಜೆಟ್ ಪೂರಕವಾಗಿಲ್ಲ.
ಎನ್.ಆರ್.ಸಂತೋಷ್ ಜೆಡಿಎಸ್ ಮುಖಂಡ
ಸಬ್ಸಿಡಿ ಹೆಚ್ಚಿಸಬೇಕಿತ್ತು
ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸುವ ಯಂತ್ರೋಪಕರಣಗಳ ಸಬ್ಸಿಡಿ ಹೆಚ್ಚಳ ಮಾಡಬೇಕಿತ್ತು. ಆಶಾ ಕಾಯಕರ್ತೆಯರು ಆರೋಗ್ಯಧನ ಹೆಚ್ಚಳ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ₹7145 ಕೋಟಿ ಅನುದಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಬಜೆಟ್‍ನಲ್ಲಿ ಒಂದು ವರ್ಗದವರ ತುಷ್ಟೀಕರಣ ಸರಿಯಲ್ಲ.
ಸಿ.ಜಿ.ರವಿ ರೈತ ಮುಖಂಡ ಚನ್ನರಾಯಪಟ್ಟಣ
ಯುವಜನ ವಿರೋಧಿ ಬಜೆಟ್
ಕೃಷಿಯಾಧಾರಿತ ಪಶು ಸಂಗೋಪನೆ ಆಧಾರಿತ ಕೈಗಾರಿಕೆ ಹಾಗೂ ಸ್ಥಳೀಯವಾಗಿ ಕೈಗಾರಿಕೆ ಆರಂಭಿಸಿ ಉದ್ಯೋಗ ಸೃಷ್ಟಿಸಲು ಅಗತ್ಯ ಕ್ರಮಕೈಗೊಳ್ಳುವಲ್ಲಿನ ಬಜೆಟ್ ವಿಫಲವಾಗಿದೆ. ಖಾಸಗಿ ರಂಗದ ಉದ್ಯೋಗಗಳಲ್ಲಿ ಮೀಸಲಾತಿ ತರುವಲ್ಲಿಯೂ ವಿಫಲವಾಗಿದೆ. ಯುವಜನ ಜನಸಾಮಾನ್ಯರ ವಿರೋಧಿ ಬಜೆಟ್ ಇದಾಗಿದೆ. ಪೃಥ್ವಿ
ಎಂ.ಜಿ. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.