ADVERTISEMENT

ಭಿಕ್ಷೆ ಬೇಡುವ ಪರಿಸ್ಥಿತಿಗೆ ತರಬೇಡಿ

ಶಾಸಕರಿಗೆ ಅನುದಾನ ಒದಗಿಸದ ರಾಜ್ಯ ಸರ್ಕಾರ: ಶಾಸಕ ಬಾಲಕೃಷ್ಣ ಬೇಸರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:41 IST
Last Updated 9 ಆಗಸ್ಟ್ 2025, 2:41 IST
ಸಿ.ಎನ್. ಬಾಲಕೃಷ್ಣ
ಸಿ.ಎನ್. ಬಾಲಕೃಷ್ಣ   

ಹಾಸನ: ‘ರಾಜ್ಯದ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರದ ತಾರತಮ್ಯ ಸರಿಯಲ್ಲ. ರಾಜ್ಯ ಸರ್ಕಾರದಿಂದ ನಮಗೆ ₹ 50ಕೋಟಿನೂ ಇಲ್ಲ, ₹25 ಕೋಟಿನೂ ಇಲ್ಲ. ಇನ್ನೂ ಯಾವುದೇ ಅನುದಾನ ಬಂದಿಲ್ಲ ’ ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಗಸ್ಟ್ 11 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದೆ. ಸರ್ಕಾರ 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇಂದಿನ ಸರ್ಕಾರದಿಂದ ಉಪಯೋಗವಿಲ್ಲ ಎಂಬಂತಾಗಿದೆ’ ಎಂದು ದೂರಿದರು.

‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ ನ್ಯಾಯದಡಿ ಅನುದಾನ ಕೊಟ್ಟಿದ್ದರು. ಆದರೆ ಈ ಸರ್ಕಾರದ ಅವಧಿಯಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆತಂಕ ಮೂಡುತ್ತಿದೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಪಕ್ಷದ ಮತದಾರರು ಇದ್ದಾರೆ. ಶಾಸಕರು ಅನುದಾನಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಕೊಂಡೊಯ್ಯಬಾರದು. ಸಕಾಲದಲ್ಲಿ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿ ಇರಬೇಕಿತ್ತು, ಆದರೆ ಹಾಗೆ ಆಗುತ್ತಿಲ್ಲ. ಗ್ರಾಮೀಣ ಸೇರಿದಂತೆ ಎಲ್ಲ ರಸ್ತೆಗಳು ಕೆಸರು ಗದ್ದೆಯಾಗಿವೆ. ಗುಂಡಿ ಮುಚ್ಚಲು ಆಗುತ್ತಿಲ್ಲ. ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಲು ಆಗುತ್ತಿಲ್ಲ ’ ಎಂದು ಆರೋಪಿಸಿದರು.

‘ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ತಮ್ಮ ಗೌರವ ಉಳಿಸಿಕೊಳ್ಳಲು ಸರ್ಕಾರ ಸಹಕಾರ ನೀಡಬೇಕು. ಮುಂಗಾರು ಮಳೆ ಮುಂಚೆಯೇ ಬಂದಿದ್ದು, ರಸ್ತೆಗಳೆಲ್ಲ ಹಾಳಾಗಿವೆ. ವಿದ್ಯಾರ್ಥಿಗಳು, ರೈತರು ಕಷ್ಟದಲ್ಲಿ ಓಡಾಡಬೇಕಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಒಳ್ಳೆಯ ಆಲೋಚನೆ ಅಲ್ಲ. ಎಲ್ಲ ಶಾಸಕರನ್ನೂ ಸರಿಸಮನಾಗಿ ಕಾಣಬೇಕು ’ ಎಂದರು.

ಗೊಬ್ಬರದ ಕೊರತೆ ಉಂಟಾಗುತ್ತಿದೆ. 15 ದಿನ ಕಳೆದರೆ ಗೊಬ್ಬರ ಕೊರತೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಹೇಳಿದರು.

ಮತಗಳ್ಳತನ ಆರೋಪ ಅರ್ಥಹೀನ:

‘ಮತಗಳ್ಳತನ ಬಗ್ಗೆ ಕಾಂಗ್ರೆಸ್‌ನಿಂದ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನಾನೂ ಗೊಂದಲದಲ್ಲಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗೆದ್ದಿದೆ. ಇದು ಏನು ಎನ್ನುವುದು ಅರ್ಥವಾಗುತ್ತಿಲ್ಲ. ನಿಖರವಾದ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಿ ಎಂದು ಚುನಾವಣೆ ಆಯುಕ್ತರು ಹೇಳಿಕೆ ನೀಡಿದ್ದಾರೆ. ಈ ಕುರಿತು ಪಿ.ಸಿ. ಮೋಹನ್ ಅವರ ಪ್ರತಿಕ್ರಿಯೆಯನ್ನೂ ನೋಡಿದ್ದೇನೆ’ ಎಂದರು.

‘ಆ ರೀತಿ ಇದ್ದಿದ್ದರೆ ತಮಿಳುನಾಡು, ತೆಲಂಗಾಣದಲ್ಲಿ ಬಿಜೆಪಿಯವರೇ ಅಧಿಕಾರಕ್ಕೆ ಬರಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪನಂಬಿಕೆ ಇಟ್ಟುಕೊಳ್ಳುವುದು ಸೂಕ್ತವಲ್ಲ. ಚುನಾವಣಾ ಆಯೋಗಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಮತದಾನ ಆಗುತ್ತಿದೆ’ ಎಂದರು.

‘ರಾಜ್ಯದಲ್ಲಿ 136 ಸ್ಥಾನವನ್ನು ಕಾಂಗ್ರೆಸ್ ಗೆದ್ದಿರುವುದು ಬೇರೆ ರೀತಿಯಿಂದಲೇ’ ಎಂದು ಪ್ರಶ್ನಿಸಿದ ಅವರು, ‘ಆಕ್ರಮವಾಗಿದ್ದರೆ ಅಧಿಕೃತವಾಗಿ ದಾಖಲೆ ಕೊಡಲಿ’ ಎಂದು ಸವಾಲು ಹಾಕಿದರು.

‘ಕೇಂದ್ರ ಸರ್ಕಾರ ಪ್ರಭಾವ ಬೀರಿದ್ದರೆ ಚುನಾವಣೆ ಫಲಿತಾಂಶ ಬದಲಾಗುತ್ತಿತ್ತು. ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡುತ್ತಿರುವವರೇ ಈ ಬಗ್ಗೆ ಹೇಳಬೇಕಿದ್ದು, ಅವರು ಮಾತನಾಡುವ ರೀತಿಯನ್ನು ಜನರೇ ನೋಡುತ್ತಾರೆ’ ಎಂದು ಹೇಳಿದರು.

‘ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಆಗುತ್ತಿಲ್ಲ’

‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವ ಭರದಲ್ಲಿ ಉಳಿದ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕೃಷಿ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಸಚಿವರು ಜಿಲ್ಲೆಗೆ ಸುಮ್ಮನೆ ಬಂದು ಹೋಗುತ್ತಾರೆ. ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು. ‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯ ತೆಂಗು ಬೆಳೆಗಾರರ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಪರಿಹಾರ ಸಹ ಬಿಡುಗಡೆ ಮಾಡಿದ್ದರು. ಈ ಬಗ್ಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಿದೆ’ ಎಂದರು. ‘ರಾಜ್ಯದ ಶಾಸಕರಿಗೆಲ್ಲರಿಗೂ ಸಮರ್ಪಕ ಅನುದಾನ ಹಂಚಿಕೆ ಮಾಡಬೇಕು. ಸೋಮವಾರದಿಂದ ಅಧಿವೇಶನ ಶುರುವಾಗಲಿದ್ದು ಸರ್ಕಾರದ ನಡೆಯನ್ನು ಕಾದು ನೋಡಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.