ಹಾಸನ: ಜಿಲ್ಲೆಯ ಮಲೆನಾಡು ಸೇರಿದಂತೆ ಬಹುತೇಕ ತಾಲ್ಲೂಕುಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಿನದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಪ್ರಮುಖವಾಗಿ ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿಯೇ ಅಧಿಕ ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯಲ್ಲಿ 9 ಸೆಂ.ಮೀ., ಹಾನುಬಾಳು ಹೋಬಳಿಯಲ್ಲಿ 7.7, ಸಕಲೇಶಪುರ ಹೋಬಳಿ 6.1 ಸೆಂ.ಮೀ., ಯಸಳೂರು ಹೋಬಳಿಯಲ್ಲಿ 4.8 ಸೆಂ.ಮೀ. ಮಳೆ ದಾಖಲಾಗಿದೆ.
ಹೇಮಾವತಿ ಜಲಾಶಯ ಭರ್ತಿಗೆ 6 ಅಡಿ ಬಾಕಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಸಕಲೇಶಪುರ ಭಾಗದಲ್ಲಿ ನಿರಂತರ ಮಳೆಯಿಂದಾಗಿ ನಿತಯ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಜಲಾಶಯ ಭರ್ತಿಗೆ ಕೇವಲ 6 ಅಡಿ ಬಾಕಿ ಇದೆ.
ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಇದ್ದು, ಮಂಗಳವಾರ 2,915.58 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 9,491 ಕ್ಯುಸೆಕ್ ನೀರಿನ ಒಳಹರಿವಿದ್ದು, 4,700 ಕ್ಯುಸೆಕ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ.
ಶಿರಡಿ ಘಾಟ್‌ನಲ್ಲಿ ಭೂಕುಸಿತ ಭೀತಿ: ನಿರಂತರ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಹಲವು ಕಡೆ ಭೂಕುಸಿತ ಭೀತಿ ಎದುರಾಗಿದ್ದು, ಇದನ್ನು ನಿಯಂತ್ರಿಸಲು ಅಧಿಕಾರಿಗಳು ಕಸರತ್ತು ಮಾಡುತ್ತಿದ್ದಾರೆ. ಕಡಿದಾದ ಗುಡ್ಡ ಪ್ರದೇಶಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದು, ರಕ್ಷಣೆ ಕ್ರಮ ಕೈಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಆನೆಮಹಲ್ ಬಳಿಯಿಂದ ಮಾರನಹಳ್ಳಿವರೆಗೆ ಗುಡ್ಡ ಕುಸಿತದ ಭೀತಿ ಕಾಡುತ್ತಿದೆ. ಮಳೆ ಮತ್ತೆ ಹೆಚ್ಚಾದ ಹಿನ್ನೆಲೆಯಲ್ಲಿ ಗುಡ್ಡ ಕುಸಿತ ತಡೆಯಲು ಅಧಿಕಾರಿಗಳು ಮುಂದಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಮಲೆನಾಡಿನಲ್ಲಿ ಮಳೆ ಅಬ್ಬರ
ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯಾದ್ಯಂತ ಸೋಮವಾರ ಸಂಜೆಯಿಂದ ಅಬ್ಬರಿಸಿದ ಮಳೆಗೆ ಜನಜೀವನ ತತ್ತರಿಸಿದೆ. ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಎಡೆಬಿಡದೇ ಸುರಿಯುತ್ತಿದೆ. ಮಳೆ–ಗಾಳಿಯ ನಡುವೆ ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಹೇಮಾವತಿ ಉಪ ನದಿಗಳಾದ ಐಗೂರು, ಹುಲ್ಲಗತ್ತೂರು, ಯಡಕೇರಿ, ಅತ್ತಿಗನಹಳ್ಳಿ, ಹಳ್ಳಿಗದ್ದೆ ಹೊಳೆಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ.
ಮಳೆಯಿಂದಾಗಿ ಬಹುತೇಕ ಮಂದಿ ದ್ವಿಚಕ್ರ ವಾಹನ ಬಿಟ್ಟು ಕಾರು, ಜೀಪುಗಳಲ್ಲೇ ಸಂಚರಿಸುತ್ತಿದ್ದಾರೆ. ಮಳೆಯಿಂದಾಗಿ ಪಟ್ಟಣದಲ್ಲಿ ಜರ್ಕೀನ್, ರೇನ್‌ಕೋಟ್, ಛತ್ರಿ, ಮಳೆಗಾಲದ ಚಪ್ಪಲಿಗಳಿಗೆ ವ್ಯಾಪಕ ಬೇಡಿಕೆ ಕಂಡು ಬಂದಿದೆ.
ಬಿಸಲೆ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಸಂಜೆ ಬಳಿಕ ಹತ್ತಿರದ ವಾಹನಗಳು ಕಾಣದಷ್ಟು ದಟ್ಟವಾಗಿ ಮಂಜು ಮುಸುಕಿದೆ.
ಗಾಳಿ, ಮಳೆಗೆ ಹೆತ್ತೂರು ಬಿ.ಬ್ಲಾಕ್ ಗ್ರಾಮದ ಗೌರಮ್ಮಅವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ, ಸದಸ್ಯ ಉಮೇಶ್, ಅಭಿವೃದ್ಧಿ ಅಧಿಕಾರಿ ವಸೀಂ ಉದ್ದಿನ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅತಿಯಾದ ಮಳೆಯಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಗಾಳಿಯಿಂದ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಹೋಬಳಿಯ ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.
ಮೂರು ತಿಂಗಳು ಮಲೆನಾಡಿನಲ್ಲಿ ಮಳೆ ಸುರಿಯುವುದು ಸಾಮಾನ್ಯವಾಗಿದ್ದು, ಸ್ವಲ್ಪ ದಿನ ಮಳೆ ಬಿಡುವು ಕೊಟ್ಟರೆ ಸಾಕಪ್ಪ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.
ಅರಕಲಗೂಡಿನಲ್ಲಿ ಮಳೆ ಬಿರುಸು
ಅರಕಲಗೂಡು: ತಾಲ್ಲೂಕಿನಲ್ಲಿ ಮಂಗಳವಾರ ಮಳೆ ಚುರುಕು ಪಡೆದುಕೊಂಡಿದ್ದು ಧಾರಾಕಾರವಾಗಿ ಸುರಿಯಿತು. ಕಳೆದ ಎರಡು ದಿನಗಳಿಂದ ಆಗಾಗ್ಗೆ ಬೀಳುತ್ತಿದ್ದ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿತು. ಜಿಟಿ ಜಿಟಿ ಮಳೆಗೆ ಜನರು ಮನೆಯಿಂದ ಹೊರಬರಲು ಕೊಡೆಗಳನ್ನು ಆಶ್ರಯಿಸುವಂತಾಗಿತ್ತು. ಜೋರು ಮಳೆಯಿಂದಾಗಿ ಪಟ್ಟಣದಲ್ಲಿ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ಹರಿದು ಕೆಲವು ಕಡೆ ರಸ್ತೆಗಳ ಮೇಲೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಹೊರಭಾಗದ ಮಲ್ಲಿಪಟ್ಟಣ ರಸ್ತೆ ಬದಿ ಎಸೆದಿರುವ ತ್ಯಾಜ್ಯದ ಮೇಲೆ ಮಳೆ ನೀರು ಆವರಿಸಿತ್ತು.
ಮಳೆಯಲ್ಲೇ ವಾಹನಗಳ ಸಂಚಾರದಿಂದಾಗಿ ರಸ್ತೆಯಲ್ಲಿ ಪಾದಚಾರಿಗಳ ಮೇಲೆ ಕೆಸರಿನ ಅಭಿಷೇಕವಾಯಿತು. ಹದಗೆಟ್ಟ ರಸ್ತೆಗಳ ಗುಂಡಿಗಳಲ್ಲಿ ಕೆಸರುಮಯವಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಓಡಾಡಲು ಕಿರಿಕಿರಿ ಅನುಭವಿಸುವಂತಾಗಿತ್ತು. ಮಳೆಯಿಂದ ಕೃಷಿ ಬೆಳೆಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಆದರೆ ಹಲವೆಡೆ ತಗ್ಗು ಪ್ರದೇಶದ ಬೆಳೆ ಜಮೀನು ಜಲಾವೃತವಾಗಿದೆ.
ತಂಬಾಕು ಆಲೂಗಡ್ಡೆ ಮುಸುಕಿನ ಜೋಳದ ಬೆಳೆಯಲ್ಲಿ ನಿಂತಿದ್ದ ನೀರನ್ನು ಬಸಿ ಕಾಲುವೆ ತೆಗೆದು ಹೊರ ಕಳುಹಿಸಲು ರೈತರು ಹರಸಾಹಸ ಪಡುವಂತಾಗಿತ್ತು. ಕಾಡಾನೆಗಳ ಹಾವಳಿಯಿರುವ ಮಲ್ಲಿಪಟ್ಟಣ ಹೋಬಳಿಯಲ್ಲಿ ಬೆಳಿಗ್ಗೆಯಿಂದಲೇ ವರ್ಷಧಾರೆ ಜೋರಾಗಿತ್ತು. ಹೀಗಾಗಿ ರೈತರು ಹಾಗೂ ಕೂಲಿ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವಂತಾಗಿತ್ತು. ಕೆಲವರು ಸೋನೆ ಮಳೆಯನ್ನು ಲೆಕ್ಕಿಸದೆ ತೋಟಗಳ ಕೆಲಸದಲ್ಲಿ ತೊಡಗಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.