ADVERTISEMENT

ಹಾಸನ| ರಾಜ್ಯದ ಪ್ರಗತಿಗೆ ಮಠಗಳ ಕೊಡುಗೆ ಮಹತ್ತರ: ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 2:14 IST
Last Updated 26 ಅಕ್ಟೋಬರ್ 2025, 2:14 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಪುಷ್ಪಗಿರಿ ಆರೋಗ್ಯ ವಿಜ್ಞಾನ ಸಂಸ್ಥೆ ಹಾಗೂ ಪುಷ್ಪಗಿರಿ ಇನ್ಫಿನೆಕ್ಸಾ ಸಾಫ್ಟ್‌ವೇರ್ ಕಂಪನಿಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು 
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಪುಷ್ಪಗಿರಿ ಆರೋಗ್ಯ ವಿಜ್ಞಾನ ಸಂಸ್ಥೆ ಹಾಗೂ ಪುಷ್ಪಗಿರಿ ಇನ್ಫಿನೆಕ್ಸಾ ಸಾಫ್ಟ್‌ವೇರ್ ಕಂಪನಿಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು    

ಹಾಸನ: ‘ಮಠಗಳು ಅನ್ನದಾಸೋಹದ ಜೊತೆಗೆ ವಿದ್ಯಾ ದಾಸೋಹ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಸಮಾಜಮುಖಿ ಕೆಲಸ ಮಾಡುತ್ತ ಜನರ ನಡುವೆ ಅನ್ಯೋನ್ಯದಿಂದ ಸಾಗುತ್ತಿದ್ದು, ಬಸವಾದಿ ಶರಣರ ನಿಜವಾದ ತತ್ವ ಸಾರುತ್ತಿವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪುಷ್ಪಗಿರಿ ಆರೋಗ್ಯ ವಿಜ್ಞಾನ ಸಂಸ್ಥೆ ಹಾಗೂ ಪುಷ್ಪಗಿರಿ ಇನ್ಫಿನೆಕ್ಸಾ ಸಾಫ್ಟ್‌ವೇರ್ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಮಠಮಾನ್ಯಗಳ ಕೊಡುಗೆ ಹೆಚ್ಚಿದೆ. ಅನೇಕ ಮಠಗಳು ರಾಜ್ಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿವೆ. ಇದರಲ್ಲಿ ಪುಷ್ಪಗಿರಿ ಮಠವು ಒಂದಾಗಿದೆ. ಆದಿಚುಂಚನಗಿರಿ ಮಠ ಸಹ ಈಗಾಗಲೇ ಮೂರು ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದೆ. ಅದರಂತೆಯೇ ಪುಷ್ಪಗಿರಿ ಮಠವೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಇದೀಗ ವೈದ್ಯಕೀಯ ಕಾಲೇಜು ಪ್ರಾರಂಭಿಸುತ್ತಿದ್ದು, ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ‘ಸಮಾಜದ ಉದ್ಧಾರಕ್ಕಾಗಿ ಮಠವು ಹೆಮ್ಮೆಯ ಕೆಲಸ ಮಾಡುತ್ತಿದೆ. ಪೂಜೆ, ಧಾರ್ಮಿಕತೆ ಜೊತೆಗೆ ಮಹಿಳೆಯರ ಸಬಲೀಕರಣ, ಆರೋಗ್ಯ, ಶಿಕ್ಷಣ, ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಮಠದ ವತಿಯಿಂದ ಅನೇಕ ಕೆಲಸಗಳು ಆಗುತ್ತಿರುವುದು ಶ್ಲಾಘನೀಯ’ ಎಂದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮೇಯರ್ ಗಿರೀಶ್ ಚನ್ನವೀರಪ್ಪ, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ,  ಗ್ರಾನೈಟ್ ರಾಜಶೇಖರ್, ಸೆನೆಟ್‌ ಸದಸ್ಯ ಶ್ರೀನಿವಾಸ್, ಸಿ.ಜೆ. ಕುಮಾರಸ್ವಾಮಿ, ನವಿಲೇ ಪರಮೇಶ್ , ಕೆ.ಎಸ್. ವಿರೂಪಾಕ್ಷ, ಗುರುಪ್ರಸಾದ್, ಡಾ.ಅಶೋಕ್ ಕುಮಾರ್, ಹಿರಣ್ಣಯ್ಯ, ಡಾ. ಉಮೇಶ್, ಶಿವರಾಮ್, ಕಟ್ಟಾಯ ಶಿವಕುಮಾರ್, ಬಸವರಾಜ್, ಡಾ. ಶಿವಕುಮಾರ್ ಇತರರು ಭಾಗವಹಿಸಿದ್ದರು.

ಸೋಮಶೇಖರ ಸ್ವಾಮೀಜಿ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಎಸ್‌.ಎಂ. ಕೃಷ್ಣ ನಗರದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸುತ್ತಿದ್ದು ನಿವೇಶನದ ಕಂತು ಪಾವತಿ ವಿಚಾರದಲ್ಲಿ ಮುಖ್ಯಮಂತ್ರಿ ವಿನಾಯಿತಿ ನೀಡಬೇಕು
ಎಚ್‌.ಕೆ. ಸುರೇಶ್‌ ಬೇಲೂರು ಶಾಸಕ

‘ಸಮಾಜ ಸೇವೆಗೆ ಎಲ್ಲರಿಂದಲೂ ಸಹಕಾರ’

10 ವರ್ಷಗಳಿಂದ ಮಠವು ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದೊಂದೇ ಹೆಜ್ಜೆಯಾಗಿ ಇಂದು 15 ಸಂಸ್ಥೆಗಳನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಹೇಳಿದರು. ನಮ್ಮೆಲ್ಲ ಸಾಧನೆಗೆ ದಾನಿಗಳು ಅಧಿಕಾರಿಗಳು ಜನಪ್ರತಿನಿಧಿಗಳು ಶಾಸಕರು ಸಚಿವರು ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಾವು ಇಲ್ಲಿ ನಿಮಿತ್ತ ಮಾತ್ರ. ಸಮಾಜ ಸುಧಾರಣೆ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಣ್ಣ ಕೊಠಡಿಯಲ್ಲಿ ಇದ್ದ ಮಠವು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. 10 ವರ್ಷದಲ್ಲಿ ಈ ಮಟ್ಟಕ್ಕೆ ಬೆಳೆಯಲು ಅವರ ಕೊಡುಗೆಯು ಹೆಚ್ಚಿದೆ. ಇದೀಗ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾಧಿಕಾರಿ ಕಾರ್ಯಕ್ಕೆ ಸಚಿವ ಪಾಟೀಲ ಮೆಚ್ಚುಗೆ

‘ಹಾಸನ ಜಿಲ್ಲಾಧಿಕಾರಿಯಾಗಿ ಲತಾಕುಮಾರಿ ಬಂದಿದ್ದಾರೆ. ಅವರು ನಮ್ಮ ಮತಕ್ಷೇತ್ರದಲ್ಲಿ ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದರು. ಅಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡಿದ್ದರು. ಒಂದೂವರೆ ವರ್ಷ ನಮ್ಮ ಇಲಾಖೆಯಲ್ಲಿಯೇ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಅವರಲ್ಲಿ ಒಳ್ಳೆಯ ಕಾರ್ಯವೈಖರಿ ಇದೆ’ ಎಂದು ಸಚಿವ ಶರಣಪ್ರಕಾಶ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು. ‘ಒಳ್ಳೆಯ ಅಧಿಕಾರಿಯ ಲಕ್ಷಣವೇನೆಂದರೆ ಎಲ್ಲರ ಮಾತುಗಳನ್ನು ಸಮಾಧಾನದಿಂದ ಕೇಳುವುದು. ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಅದು ಬಹಳ ಮುಖ್ಯ. ರಾಜಕಾರಣಿಗಳಲ್ಲಿ ಹಾಗೂ ಅಧಿಕಾರಿಗಳಲ್ಲಿ ಬಹಳ ದೊಡ್ಡ ಗುಣ ಇರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.