ADVERTISEMENT

ಕೊರೊನಾ ಲಸಿಕೆ ಸಂಶೋಧನೆ ತಂಡದಲ್ಲಿ ಅರಕಲಗೂಡು ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 20:33 IST
Last Updated 16 ಮಾರ್ಚ್ 2020, 20:33 IST
ಮಹದೇಶ್ ಪ್ರಸಾದ್
ಮಹದೇಶ್ ಪ್ರಸಾದ್   

ಅರಕಲಗೂಡು (ಹಾಸನ): ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧಿಸಲು ವಿಶ್ವ ಆರೋಗ್ಯ ಸಂಘ ರೂಪಿಸಿರುವ ‘ಯುರೋಪಿಯನ್ ಟಾಸ್ಕ್ ಫೋರ್ಸ್‌ ಫಾರ್‌ ಕೊರೊನಾ ವೈರಸ್‌’ ತಂಡದಲ್ಲಿ ಅರಕಲಗೂಡಿನ ಯುವ ವಿಜ್ಞಾನಿ ಎ.ಜೆ.ಮಹದೇಶ್‌ ಪ್ರಸಾದ್‌ ಕೂಡ ಇದ್ದಾರೆ.

‘ಲಸಿಕೆ ಕಂಡುಹಿಡಿಯುವ ಪ್ರಯತ್ನವನ್ನು 10 ಮಂದಿಯನ್ನೊಳಗೊಂಡ ನಮ್ಮ ತಂಡ ಎರಡು ತಿಂಗಳ ಹಿಂದೆ ಆರಂಭಿಸಿತ್ತು. ಇದುವರೆಗೆ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ’ ಎಂದು ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪೂರೈಸಿದ್ದು, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.

ADVERTISEMENT

ಬೆಲ್ಜಿಯಂನ ಲುವೆನ್‌ ವಿಶ್ವವಿದ್ಯಾಲಯದ ಆರ್‌ಇಜಿಎ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಆ್ಯಂಡ್‌ ಕಿಮೋಥೆರಪಿ ವಿಭಾಗದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕು ಹಬ್ಬುತ್ತಿದ್ದಂತೆ ಜಾಗೃತವಾದ ಯೂರೋಪ್‌ ರಾಷ್ಟ್ರಗಳು ಹತ್ತು ಸಂಶೋಧನಾ ತಂಡ ರಚಿಸಿದಾಗ, ಮಹದೇಶ್‌ ಹೆಸರನ್ನು ಲಿಂಕೋಪಿಂಗ್‌ ವಿಶ್ವವಿದ್ಯಾಲಯದ ಕುಲಪತಿಯು ಶಿಫಾರಸು ಮಾಡಿದರು.

‘ನಾವು ಸಂಶೋಧನೆಯಲ್ಲಿ ತೊಡಗಿರುವ ಲಸಿಕೆಯು ಕೊರೊನಾ ವೈರಸ್‌ ಹಾಗೂ ಹಳದಿ ಜ್ವರದಿಂದ ದೀರ್ಘಕಾಲ ರಕ್ಷಣೆ ನೀಡುವಂಥದ್ದು. ಈಗಾಗಲೇ ಇಲಿಗಳ ಮೇಲೆ ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. ಮುಂದಿನ ಹಂತದಲ್ಲಿ ಮಂಗಗಳ ಮೇಲೆ ಪ್ರಯೋಗ ನಡೆಸಲಾಗುವುದು’ ಎಂದು ಸುದ್ದಿ ವಾಹಿನಿಯೊಂದಕ್ಕೆ ಮಹದೇಶ್‌ ಪ್ರತಿಕ್ರಿಯಿಸಿದ್ದಾರೆ.

ಸೋದರ ಕೋಮಲ್ ಕುಮಾರ್ ಕೂಡ ವಿಜ್ಞಾನಿಯಾಗಿದ್ದು, ಫಿನ್‌ಲ್ಯಾಂಡ್‌ನಲ್ಲಿ ಕ್ಯಾನ್ಸರ್‌ ರೋಗಕ್ಕೆ ಔಷಧ ಸಂಶೋಧಿಸುವ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಲಸಿಕೆ ಸಂಶೋಧಿಸುವ ತಂಡದಲ್ಲಿ ನನ್ನ ಮಗ ಭಾಗಿಯಾಗಿರುವುದು ಸಂತೋಷವಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಇದು ನಮ್ಮ ಪಾಲಿಗೆ ಹೆಮ್ಮೆ’ ಎಂದು ಮೈಸೂರಿನಲ್ಲಿ ನೆಲೆಸಿರುವ ಮಹದೇಶ್‌ ಅವರ ತಾಯಿ ರತ್ನಮ್ಮ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.