ಹೊಳೆನರಸೀಪುರ: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಂತೆ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾಲಿಂಗ, ಹಲವಾರು ವರ್ಷಗಳಿಂದ ಶಿಕ್ಷಕರು ಸರ್ಕಾರದ ಹಲವಾರು ಗಣತಿಗಳಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ತರುವಲ್ಲಿ ಕೈಜೋಡಿಸಿದ್ದೇವೆ. ಈ ಬಾರಿಯೂ ರಾಜ್ಯ ಸರ್ಕಾರ ಸಮೀಕ್ಷೆಗೆ ನಮಗೆ ಹೊಣೆಗಾರಿಕೆ ನೀಡಿದೆ ಎಂದರು.
ಈ ಹಿಂದೆ ಸಮೀಕ್ಷೆಗಳನ್ನು ಬರವಣಿಗೆಯಲ್ಲಿ ಸಿದ್ದಪಡಿಸಿ ಕೊಡಲಾಗುತ್ತಿತ್ತು. ಆದರೆ ಈ ಬಾರಿ ಗಣತಿಗಾರರಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿ, ಕಾಗದ ರಹಿತ ಸಮೀಕ್ಷೆ ನಡೆಸಲು ಸೂಚಿಸಿದ್ದು, ಹೊಸದಾಗಿ ಆ್ಯಪ್ ನೀಡಿದೆ. ಅದರಲ್ಲಿ ಸಮೀಕ್ಷೆ ಎಲ್ಲ ಅಂಶಗಳನ್ನು ದಾಖಲಿಸುವ ಅವಕಾಶ ಕಲ್ಪಿಸಿದೆ. ಆದರೆ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತಿವೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರಿಗೆ ಯುಎಚ್‍ಐಡಿ, ಮನೆಗಳ ಜಿಪಿಎಸ್ ಲೋಕೇಶನ್ ಹುಡುಕುವ ವಿಧಾನ, ವಿದ್ಯುತ್ತ ಆರ್‍ಆರ್ ನಂಬರ್‌ಗಳನ್ನು ಪರಿಷ್ಕರಿಸಿ, ಮನೆ ಪಟ್ಟಿ, ದೂರವಾಣಿ ಸಂಖ್ಯೆ, ಕುಟುಂಬದ ಯಜಮಾನರ ಹೆಸರು ಕೊಡುವುದರಿಂದ ಗಣತಿ ಸುಸೂತ್ರವಾಗಿ ನಡೆಸಲು ಸಹಕಾರಿ ಆಗಲಿದೆ ಎಂದರು.
ಸಮೀಕ್ಷೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಅದರ್ಶ ಶಾಲೆಯ ಶಿಕ್ಷಕರನ್ನು ಕೈಬಿಟ್ಟಿದ್ದು, ಅವರನ್ನೂ ನೇಮಕ ಮಾಡಿದಲ್ಲಿ ಒತ್ತಡ ಕಡಿಮೆ ಆಗುವ ಸಾಧ್ಯತೆ ಇದೆ. ಅವರನ್ನೂ ಸಮೀಕ್ಷೆಗೆ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಸಮೀಕ್ಷೆ ವೇಳೆ ಒಟಿಪಿ ಬರಬೇಕು. ಆದರೆ ಅದು ಬರುವುದೇ ಇಲ್ಲ. ತುಂಬ ಸಮಸ್ಯೆ ಎದುರಿಸುವಂತಾಗಿದೆ. ಜಿಪಿಎಸ್ ಲೊಕೇಶನ್ ಮೂಲಕ ಜಾತಿ ಗಣತಿ ಕಷ್ಟ ಸಾಧ್ಯ ಎಂದು ತಿಳಿಸಿದರು.
ಅನಾರೋಗ್ಯಪೀಡಿತ ಶಿಕ್ಷಕರನ್ನು ಹಾಗೂ 55 ವರ್ಷ ಮೇಲಿನ ಶಿಕ್ಷಕರನ್ನು ಗಣತಿ ಕಾರ್ಯದಿಂದ ಕೈಬಿಡಬೇಕು. ಗಣತಿ ಕಾರ್ಯದಲ್ಲಿ ಒಬ್ಬ ಸಮೀಕ್ಷೆದಾರರಿಗೆ ಗರಿಷ್ಠ 75 ಕುಟುಂಬಗಳನ್ನು ದಾಖಲಿಸಬೇಕೆಂಬ ನೀತಿ ಆಳವಡಿಸಬೇಕು ಎಂದು ಮನವಿ ಮಾಡಿದರು.
ಮನವಿ ಆಲಿಸಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ನಿಮ್ಮ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸಭೆ ಕರೆದಿದ್ದು, ಅಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.