
ಕೊಣನೂರು: ರಾಮನಾಥಪು ಹೋಬಳಿಯ ಕೇರಳಾಪುರದ ವೀರಭದ್ರೇಶ್ವರಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಕಳೆದೆರಡು ದಿನಗಳಿಂದ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಹೋಮ–ಹವನಗಳು ಜರುಗಿದವು.
ಪೂಜಾ ವಿಧಿವಿಧಾನಗಳು ಕಾರ್ಯಗಳು ಮುಗಿದ ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿರಿಸಿ ತಹಶೀಲ್ದಾರ್ ಕೆ.ಸಿ.ಸೌಮ್ಯ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು.
ಕೇರಳಾಪುರ ಮತ್ತು ವಿವಿಧೆಡೆಗಳಿಂದ ಬಂದಿದ್ದ ನೂರಾರು ಭಕ್ತರು ರಥವನ್ನು ದೇವಸ್ಥಾನ ಬಳಿಯಿಂದ ಎಳೆದರು. ನಂತರ ಮುಖ್ಯ ರಸ್ತೆಗಳ ಮೂಲಕ ಸಾಗಿ ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ರಥದ ಮುಂದೆ ನೂರಾರು ತೆಂಗಿನಕಾಯಿ ಈಡುಗಾಯಿ ಹಾಕಿ, ಹಣ್ಣು ತೂರಿ, ಹಣ್ಣುಕಾಯಿ ಅರ್ಷಿಸಿ ಭಕ್ತಿ ಸಮರ್ಪಿಸಿದರು.
ದೇವಾಲಯದ ಮತ್ತು ರಥವನ್ನು ಹೂವಿನಿಂದ ಅಲಂಕರಿಸಿದ್ದು ಭಕ್ತರ ಮನಸೆಳೆಯಿತು. ಬಿಸಿಲಿನಲ್ಲೂ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು. ಕೆ.ಆರ್ ನಗರ, ಹೊಳೆನರಸೀಪುರ, ಅರಕಲಗೂಡು ಮತ್ತು ಪಿರಿಯಾಪಟ್ಟಣ ಸೇರಿದಂತೆ ಬೇರೆ ಜಿಲ್ಲೆಗಳಿಂದ ಸಾವಿರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಧಾರ್ಮಿಕ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಸಿ.ಸೌಮ್ಯ, ಶಾಸಕ ಎ.ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.