
ಹಾಸನ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಪ್ರಾರಂಭ ಹಾಗೂ ಕೆಎಂಎಫ್ ಮೂಲಕ ಜೋಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ನೂರಾರು ರೈತರು ಹಾಗೂ ಮುಖಂಡರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಎನ್.ಆರ್. ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಬಳ್ಳೂರು ಸ್ವಾಮಿಗೌಡ, ‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಾಗಿ ಕೇಂದ್ರ ಸರ್ಕಾರ ₹ 2,400 ಹಾಗೂ ರಾಜ್ಯ ಸರ್ಕಾರದ ವಂತಿಕೆ ₹ 600 ಸೇರಿ ₹ 3ಸಾವಿರ ದರ ನಿಗದಿ ಮಾಡಬೇಕು. ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಿಗೆ ಧಾವಿಸಬೇಕು. ಕೆಎಂಎಫ್ ಮೂಲಕ ಸ್ಥಳೀಯ ರೈತರ ಜೋಳವನ್ನು ಖರೀದಿ ಮಾಡಲು ಸೂಕ್ತ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.
‘ರೈತರ ಅನಿರ್ದಿಷ್ಟಾವಧಿ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ತೀವ್ರಗೊಳಿಸಲಾಗುವುದು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆಯಾ ಜಿಲ್ಲೆಯ ಶಾಸಕರು ರೈತರ ನೆರವಿಗೆ ಧಾವಿಸಬೇಕು. ಹುಡುಗಾಟಕ್ಕೆ ಹೋರಾಟ ಮಾಡುತ್ತಿಲ್ಲ. ಬದಲಿಗೆ ರೈತರ ಸಮಸ್ಯೆಯನ್ನು ಸರ್ಕಾರದ ಬಳಿ ಹೇಳುತ್ತಿದ್ದೇವೆ. ಇದಕ್ಕೆ ಸೂಕ್ತ ಸ್ಪಂದನೆ ಸಿಗಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಸುಕಿನ ಗುದ್ದಾಟದ ನಡುವೆ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ 55 ಲಕ್ಷ ಟನ್ ಮುಸುಕಿನ ಜೋಳ ಬೆಳೆಯಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಉಕ್ರೇನ್‌ನಿಂದ 70 ಲಕ್ಷ ಟನ್ ಮೆಕ್ಕೆಜೋಳ ಖರೀದಿ ಮಾಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರದ ಇಂತಹ ನೀತಿ ವಿರುದ್ಧ ರಾಜ್ಯದಲ್ಲಿ ರೈತರು ಗಟ್ಟಿ ಹೋರಾಟ ಮಾಡಲು ಹೊರಟಿದ್ದೇವೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.
ಅರಕಲಗೂಡು ಭುವನೇಶ್, ಪ್ರಕಾಶ್, ಶಿವಕುಮಾರ್, ನವೀನ್, ಹಾಲಪ್ಪ, ಯತೀಶ್, ಅಣ್ಣಪ್ಪ, ಲಕ್ಷ್ಮಣ್, ಶೋಭಾ, ಗಂಗಾಧರಪ್ಪ, ಪುರುಷೋತ್ತಮ್ ಗೌಡ, ಹಲಗಯ್ಯ, ಬೈಚನಹಳ್ಳಿ ಯೋಗೇಶ್, ರಮೇಶ್ ಸೇರಿದಂತೆ ರೈತರು ಭಾಗವಹಿಸಿದ್ದರು.
ರೈತರ ನೆರವಿಗೆ ಶಾಸಕರು ಧಾವಿಸಲಿ
‘ರೈತರ ನೆರವಿಗೆ ಧಾವಿಸಬೇಕಾದ ಜಿಲ್ಲೆಯ ಏಳು ಮಂದಿ ಶಾಸಕರು ನಮಗೆ ಬೆಂಬಲ ನೀಡಬೇಕು. ಶಾಸಕ ಕೆ.ಎಂ ಶಿವಲಿಂಗೇಗೌಡರು ಕೇವಲ ಸದನದಲ್ಲಿ ಮಾತನಾಡುವುದಲ್ಲ. ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ರೈತ ಮುಖಂಡ ಕಣಗಾಲ್ ಮೂರ್ತಿ ಆಗ್ರಹಿಸಿದರು. ‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಕ್ಕಾಗಿ ರೈತರು ಹಗಲಿರಳು ಚಳವಳಿ ಆರಂಭಿಸಿದ್ದೇವೆ. ಖರೀದಿ ಕೇಂದ್ರ ಪ್ರಾರಂಭ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಸಿದರು. ಮೆಕ್ಕೆಜೋಳ ಬೆಳೆಯಲು ಎಕರೆಗೆ ₹ 30ಸಾವಿರದಿಂದ ₹ 40 ಸಾವಿರ ವೆಚ್ಚವಾಗುತ್ತದೆ. ನಕಲಿ ಬಿತ್ತನೆ ಬೀಜ ಪೂರೈಕೆಯಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರ ವಿತರಿಸಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.