ಕೊಣನೂರು: ಹೊಗೆಸೊಪ್ಪು ಬೆಳೆಗಾರರು ನಾಟಿ ಮಾಡಲು ಮಳೆಗಾಗಿ ಆಕಾಶದತ್ತ ನೋಡು ಪರಿಸ್ಥಿತಿ ಎದುರಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಹೊಗೆಸೊಪ್ಪನ್ನು ಹೆಚ್ಚು ಬೆಳೆಯುವ ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯ ಬೆಳೆಗಾರರು ಕಳೆದೆರಡು ತಿಂಗಳಿನಿಂದ ಸಸಿಮಡಿಗಳನ್ನು ಬೆಳೆಸಿ, ನಾಟಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಮಳೆಯಿಲ್ಲದೆ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕೆಲದಿನಗಳ ಹಿಂದೆ ಒಂದೆರಡು ಬಾರಿ ಮಳೆ ಸುರಿದಿದ್ದರಿಂದ ಕೆಲ ಭಾಗದಲ್ಲಿ ಹೊಲಗಳನ್ನು ಉತ್ತಿ, ಗೊಬ್ಬರ ಮಿಶ್ರ ಮಾಡಿದ್ದು, ಜಮೀನು ಹಸನು ಮಾಡಿಕೊಂಡು ನಾಟಿಗಾಗಿ ಸಿದ್ಧಪಡಿಸಿಕೊಂಡಿದ್ದಾರೆ. ಕೆಲವೆಡೆ ಮಳೆಯಾಗದೇ ಜಮೀನನ್ನು ಉಳುಮೆ ಮಾಡಲು ಆಗಿಲ್ಲ. ಎರಡು ತಿಂಗಳಿಂದ ಹೊಗೆಸೊಪ್ಪು ಸಸಿಗಳನ್ನು ಬೆಳೆಸಿರುವ ಬೆಳೆಗಾರರು, ಮಳೆ ತಡವಾದರೂ ಟ್ರೇನಲ್ಲಿಟ್ಟು ಕಾಪಾಡಿಕೊಂಡಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಆದರೆ, ಮಳೆ ತಡವಾಗುತ್ತಿದ್ದು, ಮಡಿಯಲ್ಲಿನ ಸಸಿಗಳು ಬಲಿತು ರೋಗಪೀಡಿತವಾಗುವ ಭಯ ಬೆಳೆಗಾರರನ್ನು ಕಾಡುತ್ತಿದೆ.
ನೀರಾವರಿ ಸೌಲಭ್ಯವಿರುವ ಕೆಲವೇ ಬೆಳೆಗಾರರು ಈಗಾಗಲೇ ಹೊಗೆಸೊಪ್ಪು ನಾಟಿ ಮಾಡಿದ್ದು, ಮಳೆಯಾಶ್ರಿತ ಜಮೀನಿನ ಬೆಳೆಗಾರರು ಮಳೆಯ ಅಭಾವದಿಂದಾಗಿ ಜಮೀನು ಮತ್ತು ಸಸಿಗಳು ನಾಟಿಗೆ ಸಿದ್ಧವಿದ್ದರೂ ಮಳೆಗಾಗಿ ಆಕಾಶ ಕಡೆಗೆ ನೋಡುವಂತಾಗಿದೆ.
ಸಸಿಗಳು ಬಲಿತು ಹಾಳಾಗುವ ಭಯದಿಂದ ಕೆಲ ರೈತರು ಅಕ್ಕಪಕ್ಕದಲ್ಲಿನ ಕೊಳವೆಬಾವಿಯ ನೀರಿನಿಂದ ನೀರು ಹಾಯಿಸಿಕೊಂಡು ನಾಟಿ ಮಾಡಲು ಪ್ರಾರಂಭಿಸಿದ್ದಾರೆ. ನಾಟಿಯಾದ ನಂತರ ತುಂತುರು ನೀರಾವರಿ ಮೂಲಕ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ತಾಪಮಾನ ಏರಿಕೆ ಮತ್ತು ಮಳೆಯ ಅಭಾವದಿಂದಾಗಿ ಹೊಗೆಸೊಪ್ಪು ಸಸಿಗಳಿಗೆ ವಿವಿಧ ರೋಗಗಳು ತಗಲುವ ಸಾಧ್ಯತೆಯಿದ್ದು, ಕಾಲಕಾಲಕ್ಕೆ ಅಗತ್ಯ ಔಷಧಗಳನ್ನು ಸಿಂಪಡಿಸಿಕೊಂಡು ಸಸಿಗಳಲ್ಲಿ ರೋಗ ಹತೋಟಿಗೆ ಮುಂದಾಗಬೇಕು. ಮಡಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆದಿರುವ ಸಸಿಗಳ ಎಲೆಗಳನ್ನು ಚಿವುಟಿ ಹತೋಟಿಯಲ್ಲಿಡಬೇಕು ಎನ್ನುತ್ತಾರೆ ತಂಬಾಕು ಮಾರುಕಟ್ಟೆಯ ಅಧಿಕಾರಿಗಳು.
ಬೆಳೆಸಿದ ಹೊಗೆಸೊಪ್ಪು ಸಸಿಗಳು ನಾಟಿಗೆ ಹದವಾಗಿದ್ದು 20 ದಿನಗಳಿಂದ ಮಳೆಗಾಗಿ ಕಾಯುತ್ತಿದ್ದೇವೆ. ಸಸಿಗಳು ಬಲಿತು ಹಾಳಾದಲ್ಲಿ ಮತ್ತೆ ಹೊಸ ಸಸಿ ಬೆಳೆಸಲು 2 ತಿಂಗಳು ಬೇಕಾಗುತ್ತದೆ ಎಂಬ ಕಾರಣಕ್ಕೆ ನೀರು ಹಾಯಿಸಿಕೊಂಡು ಸಸಿ ನೆಡುತ್ತಿದ್ದೇವೆ.ರಮೇಶ ಬಿದರೂರು ಗ್ರಾಮದ ತಂಬಾಕು ಬೆಳೆಗಾರ
ಮಂಡಳಿಯ ನಿಯಮದಂತೆ ಮೇ ಮೊದಲ ವಾರ ನಾಟಿಗೆ ಸರಿಯಾದ ಸಮಯವಾಗಿದ್ದು ಬೆಳೆಗಾರರು ಮುಂಚೆಯೇ ಸಸಿಗಳನ್ನು ಬೆಳೆಸಿಕೊಂಡಿದ್ದರಿಂದ ಮಳೆಯ ಕೊರತೆಯ ನಡುವೆಯೆ ನೀರು ಹಾಕಿಕೊಂಡು ನಾಟಿ ಮಾಡಲು ಮುಂದಾಗಿದ್ದಾರೆ.ಸವಿತಾ ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.