ADVERTISEMENT

ಕೆಪಿಆರ್‌ಎಸ್ ಅಧಿಕಾರಕ್ಕೆ ತರುವುದೇ ಗುರಿ: ರವಿಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:16 IST
Last Updated 12 ಮೇ 2022, 15:16 IST
ರವಿಕೃಷ್ಣಾರೆಡ್ಡಿ
ರವಿಕೃಷ್ಣಾರೆಡ್ಡಿ   

ಹಾಸನ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿಯಾಗಿದೆ’ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದರು.

ರಾಜ್ಯದ ಸಂಪತ್ತು ಜೆಡಿಎಸ್, ಕಾಂಗ್ರೆಸ್, ಬಿಜೆಪಿ (ಜೆಸಿಬಿ) ಪಕ್ಷಗಳ ರಾಜಕಾರಣಿಗಳ ಬಳಿ ಇದೆ. ಅವರು ತೊಲಗದ ಹೊರತು ರಾಜ್ಯ ಉದ್ಧಾರವಾಗುವುದಿಲ್ಲ. ಇದುವರೆಗೆ ಅಧಿಕಾರ ನಡೆಸಿದ ಮೂರೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ಏ. 24 ರಿಂದ ಆರಂಭಗೊಂಡಿರುವ ಜನ ಚೈತನ್ಯ ಯಾತ್ರೆ ಹಲವು ಜಿಲ್ಲೆಗಳಲ್ಲಿಸಂಚರಿಸಿ ಇದೀಗ ಹಾಸನಕ್ಕೆ ಬಂದಿದೆ. ಯಾತ್ರೆ ಉದ್ದಕ್ಕೂ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.

ADVERTISEMENT

‘ಮುಖ್ಯಮಂತ್ರಿ ಸ್ಥಾನಕ್ಕಾಗಿ ₹2,500 ಕೋಟಿ ಕೇಳಿದ್ದರು ಎಂದು ಶಾಸಕ ಯತ್ನಾಳ ಹೇಳಿದ್ದಾರೆ. ಸಿ.ಎಂ ಆ ಸ್ಥಾನಕ್ಕೆ ಎಷ್ಟು ಸಾವಿರ ಕೋಟಿ ನೀಡಿದ್ದಾರೆ? ₹45 ಸಾವಿರದಿಂದ ₹50 ಸಾವಿರ ಸಂಬಳದ ಪಿಎಸ್‍ಐ ಹುದ್ದೆ ಒಂದೂವರೆ ಕೋಟಿ ರೂಪಾಯಿಗೆ ಹರಾಜಾಗುತ್ತಿದೆ ಎಂದರೆ ಸರ್ಕಾರ ಏನು ಮಾಡುತ್ತಿದೆ, ಮುಖ್ಯಮಂತ್ರಿ ಏಕೆ ಮೌನವಾಗಿದ್ದಾರೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡುವ ಸಲುವಾಗಿ ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಹಣ, ಹೆಂಡ ಹಂಚುವುದಿಲ್ಲ. ಜನರು ದೇಣಿಗೆ ಸಂಗ್ರಹಿಸಿ ಚುನಾವಣೆ ಎದುರಿಸಲಾಗುವುದು’ ಎಂದರು.

ಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ರಮೇಶ್, ತೇಜಸ್ ಕುಮಾರ್,ಕೇಶವಮೂರ್ತಿ, ರಘು ,ಜಾಣಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.