ADVERTISEMENT

ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅಮಾನತಿಗೆ ಆಗ್ರಹ

ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಮೇ 28ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:21 IST
Last Updated 26 ಮೇ 2025, 16:21 IST

ಪ್ತಜಾವಾಣಿ ವಾರ್ತೆ

ಹಾಸನ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಅಧ್ಯಕ್ಷ ಸ್ಥಾನದಿಂದ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಜನಪರ ಒಕ್ಕೂಟದ ಸಂಘ–ಸಂಸ್ಥೆಗಳ ನೇತೃತ್ವದಲ್ಲಿ ಮೇ 28ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸದಸ್ಯ ಮೇಟಿಕೆರೆ ಹಿರಿಯಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಮಹಾವೀರ ವೃತ್ತದಿಂದ ಒಕ್ಕೂಟದ ಸದಸ್ಯರೆಲ್ಲ ಸೇರಿ ಮೆರವಣಿಗೆ ನಡೆಸಲಿದ್ದು, ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

ಮಹೇಶ್ ಜೋಶಿ ಅವರ ಸರ್ವಾಧಿಕಾರಿ ಧೋರಣೆ ಮಿತಿಮೀರಿದ್ದು, ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರು ಕೂಡ ಜನರಿಂದ ಆಯ್ಕೆ ಆದವರೇ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ನೋಟಿಸ್ ಜಾರಿ ಮಾಡಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ಬೈಲಾ ತಿದ್ದುಪಡಿ ಸೇರಿದಂತೆ ಇತರೆ ಚಟುವಟಿಕೆಗಳನ್ನು ಕಾನೂನುಬಾಹಿರವಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ಇತ್ತೀಚಿಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ದೂರು ನೀಡಲಾಗಿದೆ. ಅಲ್ಲದೆ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನು ಕೊಡದೆ ದ್ವೇಷದ ಮನಸ್ಥಿತಿ ತೋರ್ಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹೇಶ್ ಜೋಶಿ ಅವರು ಈ ಹಿಂದೆ ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಒಬ್ಬ ಅಪರಾಧಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಕುಳಿತಿರುವುದು ದುರಂತವೇ ಸರಿ ಎಂದರು.

ಮಹೇಶ್ ಜೋಶಿ ಯಾರ ಮಾತನ್ನು ಕೇಳದೆ ದುರಹಂಕಾರದ ವರ್ತನೆ ತೋರುತ್ತಿದ್ದಾರೆ. ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ. ಈ ಹಿಂದೆ ಮಾಡಿದ ಬೈಲಾ ತಿದ್ದುಪಡಿಯನ್ನು ರದ್ದು ಮಾಡುವಂತೆ ಒತ್ತಾಯಿಸುತ್ತೇವೆ ಎಂದರು.

ಪರಿಷತ್ತಿನ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ತಲೆದೋರಿರುವ ಗಡಿನಾಡಿನ ಸಮಸ್ಯೆ, ಕನ್ನಡ ಶಾಲೆ ಮುಚ್ಚುತ್ತಿರುವ ಕುರಿತು ಯಾವುದೇ ಹೋರಾಟ ಮಾಡಲಾಗಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಅನುಗುಣವಾಗಿ ಮುನ್ನಡೆಯಬೇಕು. ಆದರೆ ಎಲ್ಲದಕ್ಕೂ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಒಬ್ಬ ವ್ಯಕ್ತಿಯ ಆಸ್ತಿಯಲ್ಲ. ಕನ್ನಡ ನಾಡು, ಕನ್ನಡಿಗರ ಆಸ್ತಿಯಾಗಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.

ಪ್ರಶ್ನಿಸಿದವರಿಗೆ ನೋಟಿಸ್: ಪರಿಷತ್ತಿನಲ್ಲಿ ಅವ್ಯವಹಾರ ನಡೆಯುತ್ತಿರುವುದನ್ನು ಪ್ರಶ್ನಿಸಿದ ಬಹುತೇಕ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಒಕ್ಕೂಟದ ಸದಸ್ಯರು ಆರೋಪಿಸಿದರು.

ರಾಜ್ಯದ ಹಲವು ಸಾಹಿತಿಗಳಿಗೆ, ಕನ್ನಡಪರ ಹೋರಾಟಗಾರರಿಗೆ, ಜಿಲ್ಲಾ ಘಟಕದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಎಲ್ಲ ಬೆಳವಣಿಗೆಯನ್ನು ಖಂಡಿಸಿ ಮೇ 28ರಂದು ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದರು.

ಒಕ್ಕೂಟದ ಸದಸ್ಯರಾದ ಚಲಂ ಹಾಡ್ಲಹಳ್ಳಿ, ಡಾ. ಹಂಪನಹಳ್ಳಿ ತಿಮ್ಮೇಗೌಡ, ಧರ್ಮೇಶ್, ಎನ್.ಎಲ್. ಚನ್ನೇಗೌಡ, ಹರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.