ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

ಅರಸೀಕೆರೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:04 IST
Last Updated 12 ಡಿಸೆಂಬರ್ 2020, 5:04 IST
ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಅರಸೀಕೆರೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು
ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಅರಸೀಕೆರೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು   

ಅರಸೀಕೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಭತ್ಯೆಗಳನ್ನು ನಮಗೂ ಕಲ್ಪಿಸಬೇಕೆಂದು ಆಗ್ರಹಿಸಿ ಅರಸೀಕೆರೆಯಲ್ಲಿ ಸಾರಿಗೆ ನೌಕರರು ಶುಕ್ರವಾರ ನಗರದ ಬಸ್ ನಿಲ್ದಾಣದ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಓಂಕಾರ ನಾಯ್ಕ್ ಮಾತನಾಡಿ, ‘ನಮ್ಮ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿತ್ತು. ಆದರೆ, ನಮ್ಮ ಬೇಡಿಕೆಗೆ ಸರ್ಕಾರದವರು ಸ್ಪಂದಿಸಲಿಲ್ಲ. ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದರು.

ಪ್ರಸ್ತುತ ಸಾರಿಗೆ ನೌಕರರ ಶೇ 60ರಷ್ಟು ವೇತನ ಕಡಿಮೆಯಾಗಿದೆ. ಆರೋಗ್ಯ ಭದ್ರತೆಯೂ ಇಲ್ಲ, ಕೊರೊನಾ ಸಂದಿಗ್ಧತೆಯಲ್ಲಿ ಸಾರಿಗೆ ನೌಕರರು ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಎಷ್ಟೋ ನೌಕರರು ಸೋಂಕಿತರಾಗಿ ಸಾವನ್ನಪ್ಪಿದ್ದಾರೆ, ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರಿಗೆ ₹ 30 ಲಕ್ಷ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಕೊರೊನಾದಿಂದ ಮೃತಪಟ್ಟವರ ಕುಟುಂಬದವರಿಗೆ ಇಲ್ಲಿಯವರೆಗೂ ಬಿಡಿಗಾಸೂ ಪರಿಹಾರ ಬಂದಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ನಮ್ಮ ಬೇಡಿಕೆ ಈಡೇರುವವರೆಗೂ ಹಾಗೂ ರಾಜ್ಯ ಮಟ್ಟದ ನೌಕರರ ಸಂಘದಿಂದ ಸೂಚನೆ ಬರುವವರೆಗೂ ನಾವು ಧರಣಿ ನಡೆಸಲಾಗುವುದು’ ಎಂದರು.

ನಗರದ ಬಸ್‌ ನಿಲ್ದಾಣದೊಳಗೆ ಬಸ್ಸುಗಳು ಬಾರದ್ದರಿಂದ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕಾದು ಕುಳಿತ್ತಿದ್ದರು. ಬೆಂಗಳೂರು ಮತ್ತು ಶಿವಮೊಗ್ಗದ ಕಡೆಯಿಂದ ಸಂಚರಿಸುತ್ತಿದ್ದ ಕೆಲ ಬಸ್ಸುಗಳು ಬಸ್ ನಿಲ್ದಾಣದೊಳಗೆ ಬಾರದೆ ಹಾಗೆ ಹೋದವು.

ಮನವಿ ಸ್ವೀಕರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಸಾರಿಗೆ ನೌಕರರು ತುಂಬಾ ಸಂಕಷ್ಟದಲ್ಲಿದ್ದಾರೆ. ಪ್ರತಿದಿನ ಚಳಿ ಮಳೆಯನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರ ಬೇಡಿಕೆಗಳನ್ನು ಈಡೇರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಮಂತ್ರಿಗಳು ಗಮನಹರಿಸಬೇಕು, ಸಾಧ್ಯವಾದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಇದರ ಬಗ್ಗೆ ಸದನದ ಗಮನ ಸೆಳೆಯಲಾಗುವುದು’ ಎಂದು ಭರವಸೆ ನೀಡಿದರು.

ರಮೇಶ್, ರವಿ, ಮಂಜುನಾಥ್, ಯಶವಂತ್, ಕಲ್ಲೇಶ್ , ಕೆಎಸ್‌ಆರ್‌ಟಿಸಿ ಕೆಲವು ನೌಕರರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.