ADVERTISEMENT

ನೌಕರರ ಮುಷ್ಕರ: ಖಾಸಗಿ ವಾಹನ ಅಬ್ಬರ

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ: ಬಸ್‌ಗಳಿಲ್ಲದೆ ಪರದಾಡಿದ ಜನರು, ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:48 IST
Last Updated 6 ಆಗಸ್ಟ್ 2025, 2:48 IST
ಹಾಸನದ ಕೇಂದ್ರ ಬಸ್‌ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ಪ್ರಯಾಣಿಕರು.
ಹಾಸನದ ಕೇಂದ್ರ ಬಸ್‌ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ಪ್ರಯಾಣಿಕರು.   

ಹಾಸನ: ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಖಾಸಗಿ ವಾಹನಗಳೇ ಬಸ್‌ ನಿಲ್ದಾಣಗಳಲ್ಲಿ ಜನರಿಗೆ ಸೇವೆ ಒದಗಿಸುತ್ತಿವೆ.

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ನಿಂತು ಹೋಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಜಿಲ್ಲೆ ಸೇರಿದಂತೆ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮೀಣ ಭಾಗಗಳಿಗೆ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.

ನಗರದ ಚನ್ನಪಟ್ಟಣ ನೂತನ ಬಸ್ ನಿಲ್ದಾಣ ಸೇರಿದಂತೆ ಡಿಪೋಗಳಲ್ಲಿ ನೂರಾರು ಬಸ್‌ಗಳು ಸಾಲಾಗಿ ನಿಂತಿರುವುದು ಸಾಮಾನ್ಯವಾಗಿತ್ತು. ಘಟಕ ಒಂದು ಹಾಗೂ ಘಟಕ ಎರಡರಲ್ಲಿ ಒಟ್ಟು 230 ಕ್ಕೂ ಹೆಚ್ಚು ಬಸ್‌ಗಳು ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ADVERTISEMENT

ರಾಜಘಟ್ಟ ಮತ್ತು ಆಡುವಳ್ಳಿಯಲ್ಲಿರುವ ಘಟಕಗಳಲ್ಲೂ ಇದೇ ಪರಿಸ್ಥಿತಿ ಇದ್ದು, ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಪ್ರಯಾಣಿಕರು ಸರ್ಕಾರಿ, ಖಾಸಗಿ, ಉದ್ಯೋಗಿಗಳು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಬಸ್‌ಗಳ ಕೊರತೆಯಿಂದಾಗಿ ಖಾಸಗಿ ವ್ಯಾನ್, ಬಸ್‌ಗಳು, ಟಿಟಿ ವಾಹನಗಳು ಹಾಗೂ ಇತರೆ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಸಾರಿಗೆ ಬಸ್ ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೇ ಪ್ರಯಾಣಿಕರು ಕಾದ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

ಖಾಸಗಿ ವಾಹನಗಳ ಅಬ್ಬರ: ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್, ಟೆಂಪೊ ಟ್ರ್ಯಾಕ್ಸ್ ಸೇರಿದಂತೆ ಸಂಚಾರಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಸೂಚನೆ ನೀಡಿದ್ದು, ಸಾರಿಗೆ ಇಲಾಖೆ ಮುಕ್ತ ಅವಕಾಶ ಕಲ್ಪಿಸಿದೆ. ಹೀಗಾಗಿ ಸೋಮವಾರ ಸಂಜೆಯಿಂದಲೂ ಖಾಸಗಿ ವಾಹನಗಳು ರಸ್ತೆಗಿಳಿದಿದ್ದು, ಕೆಲವೆಡೆ ಪ್ರಯಾಣಿಕರಿಂದ ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂತು.

ಹೆಚ್ಚಿನ ದರ ವಿಧಿಸದಂತೆ ಬೆಳಿಗ್ಗೆಯೇ ಆರ್‌ಟಿಒ ಅಧಿಕಾರಿಗಳು, ಖಾಸಗಿ ಬಸ್‌ಗಳ ಮಾಲೀಕರಿಗೆ ಸೂಚನೆ ನೀಡಿದ್ದರೂ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಜನರಿಗೆ ಹೊರೆಯಾಗಿದೆ. ಮಂಗಳೂರಿಗೆ ₹ 600–₹700 ಹಾಗೂ ಬೆಂಗಳೂರಿಗೆ ₹500–₹600 ದರ ವಸೂಲಿ ಮಾಡಲಾಗುತ್ತಿದೆ.

ಜಿಲ್ಲಾ ಕೇಂದ್ರದಿಂದ ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ, ಆಲೂರು ಮತ್ತು ಅರಸೀಕೆರೆ ತಾಲ್ಲೂಕು ಕೇಂದ್ರಗಳಿಗೆ ಪ್ರಯಾಣಿಸುವವರಿಗೆ ಖಾಸಗಿ ವಾಹನಗಳು ಬಹುತೇಕ ಲಭ್ಯವಾಗುತ್ತಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಹಳ್ಳಿಗಳಿಗೆ ಪ್ರಯಾಣಿಸುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೌಕರರ ಮನವೊಲಿಕೆ ವಿಫಲ: ರಾಜ್ಯದ ನಾನಾ ಸಾರಿಗೆ ನಿಗಮಗಳ ಹಾಗೂ ಜಿಲ್ಲೆಯ ನೌಕರರ ಮನವೊಲಿಕೆಗೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ.

‘ನಿಗಮಗಳ ಚಾಲಕ ಹಾಗೂ ನಿರ್ವಾಹಕರಿಗೆ ದೂರವಾಣಿ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಮಂಗಳವಾರ ಕೇವಲ ಎರಡು ಬಸ್‌ಗಳು ಮಾತ್ರ ಕಾರ್ಯಚರಣೆ ನಡೆಸಿದ್ದು, ಹಾಸನ ವಿಭಾಗಕ್ಕೆ ಒಳಪಟ್ಟ 583 ಹಾಗೂ ಚಿಕ್ಕಮಗಳೂರು ವಿಭಾಗದ್ದು ಸೇರಿದಂತೆ ಜಿಲ್ಲೆಯಲ್ಲಿ 834 ಸಾರಿಗೆ ಸೇವೆ ಒದಗಿಸಲಾಗುತ್ತಿದ್ದು, ಎಲ್ಲ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ’ ಎಂದು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದ್ದಾರೆ.

ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಅನ್ನು ಚಾಲಕ ಹಾಸನ ಬಸ್‌ ನಿಲ್ದಾಣದ ಮಧ್ಯದಲ್ಲಿಯೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡಿದರು.
ಹಾಸನದ ಡಿಪೋದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು.
ಹಾಸನದ ಕೇಂದ್ರ ಬಸ್ ನಿಲ್ದಾಣದಿಂದ ಸಂಚರಿಸಿದ ಖಾಸಗಿ ವಾಹನಗಳು.

ಬಸ್‌ ನಿಲ್ದಾಣದಲ್ಲಿ ಹೈಡ್ರಾಮಾ

ಮಂಗಳವಾರ ಮಧ್ಯಾಹ್ನ ಇಲ್ಲಿನ ಚನ್ನಪಟ್ಟಣದ ಕೇಂದ್ರ ಬಸ್‌ ನಿಲ್ದಾಣದ ಎದುರು ಹೈಡ್ರಾಮಾ ನಡೆದಿದ್ದು ಬಸ್‌ ಹತ್ತಿ ಕುಳಿತಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕೆಎಸ್‌ಆರ್‌ಟಿಸಿ ಒಂದು ಬಸ್‌ ಅನ್ನು ನಿಲ್ದಾಣಕ್ಕೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಹೊರಡಿಸಲಾಗುತ್ತಿತ್ತು. ಅಷ್ಟರಲ್ಲಿಯೇ ಖಾಸಗಿ ವಾಹನಗಳ ಚಾಲಕರು ತಕರಾರು ತೆಗೆದರು. ಪ್ಲಾಟ್‌ಫಾರಂನಿಂದ ಬಸ್‌ ಅನ್ನು ಹೊರತಂದ ಚಾಲಕ ರಸ್ತೆ ಮಧ್ಯದಲ್ಲಿಯೇ ಬಸ್ ನಿಲ್ಲಿಸಿ ಇಳಿದು ಹೋಗಿದ್ದು ಬಸ್‌ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ನಂತರ ಆ ಎಲ್ಲ ಪ್ರಯಾಣಿಕರನ್ನು ಖಾಸಗಿ ಬಸ್‌ಗೆ ಹತ್ತಿಸಿ ಕಳುಹಿಸಲಾಯಿತು.

ಅಗತ್ಯ ಕ್ರಮ: ಜಿಲ್ಲಾಧಿಕಾರಿ ಸರ್ಕಾರಿ ಬಸ್‌ಗಳ ಸಂಚಾರ ಇಲ್ಲದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು. ಮುಷ್ಕರ ನಡೆಯುವ ಬಗ್ಗೆ ಮೊದಲೇ ಮಾಹಿತಿ ಇದ್ದುದರಿಂದ ಸರ್ಕಾರದ ಮಟ್ಟದಲ್ಲಿಯೂ ಕೂಡ ಈ ಬಗ್ಗೆ ಚರ್ಚೆ ನಡೆದಿತ್ತು. ಜಿಲ್ಲಾಡಳಿತದಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿತ್ತು ಎಂದರು. ಈಗಾಗಲೇ ಸಾರ್ವಜನಿಕರಿಗಾಗಿ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಬುಧವಾರವೂ ಪ್ರತಿಭಟನೆ ಮುಂದುವರಿದರೆ ತಾಲ್ಲೂಕು ಮಟ್ಟದಲ್ಲಿ  ಯೋಜನೆ ರೂಪಿಸಲಾಗಿದೆ.  ಜನರ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಲಾ–ಕಾಲೇಜು ಖಾಲಿ

ಮುಷ್ಕರದಿಂದಾಗಿ ಬಸ್‌ಗಳಿಲ್ಲದೇ ದೂರದ ತಾಲ್ಲೂಕುಗಳು ಮತ್ತು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಗರದ ಬಹುತೇಕ ಶಾಲಾ–ಕಾಲೇಜುಗಳು ಖಾಲಿಯಾಗಿದ್ದವು. ನಗರದ ಗಂಧದಕೋಠಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಲಾ ಕಾಲೇಜು ವಿಜ್ಞಾನ ಕಾಲೇಜು ಮಹಿಳಾ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಎಲ್ಲ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಕಾಲೇಜಿಗೆ ಬಂದಿದ್ದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕೂಡ ಪಾಠ ಇಲ್ಲದೇ ವಾಪಸ್ ಹೋಗುತ್ತಿದ್ದುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.