ADVERTISEMENT

ಕುಡಿಯುವ ನೀರಿನ ಅಭಾವ ತಪ್ಪಿಸಲು ಸಹಕರಿಸಿ

ಪರಿಸರಕ್ಕೆ ಪೂರಕವಾಗುವ ಕೆಲಸಗಳಿಗೆ ಸಾರ್ವಜನಿಕರು ಸ್ಪಂದಿಸಬೇಕು: ಡಿಸಿ ಪ್ರಿಯಾಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2019, 14:08 IST
Last Updated 2 ಮೇ 2019, 14:08 IST
ಹಾಸನದ ಪುರದಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಹಾಸನದ ಪುರದಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ಹಾಸನ: ಪ್ರಕೃತಿ ವಿಕೋಪ ಅಕಾಲಿಕವಾಗಿ ಸಂಭವಿಸುವುದು ಅಪಾಯದ ಮುನ್ಸೂಚನೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಎಚ್ಚರಿಸಿದರು.

ಹಸಿರು ಭೂಮಿ ಪ್ರತಿಷ್ಠಾನದ 2ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪುರದಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಹಾಗೂ ಕೆರೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬರಪರಿಸ್ಥಿತಿ ಎದುರಿಸಲು ಮತ್ತು ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಪರಿಸರಕ್ಕೆ ಪೂರಕವಾಗುವ ಕೆಲಸ ಮಾಡುವ ಸಂಘ-ಸಂಸ್ಥೆಗಳಿಗೆ ಸಾರ್ವಜನಿಕರು ಶ್ರಮದಾನದ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಎಲ್ಲಾ ತಾಲ್ಲೂಕುಗಳಲ್ಲಿ ಈ ರೀತಿಯ ಕೆರೆ, ಕಟ್ಟೆಗಳನ್ನು ಹೂಳೆತ್ತುವ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ವಿವಿಧ ಸಂಘ, ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಪುರದಮ್ಮ ದೇವಾಲಯಕ್ಕೆ ಸಾವಿರಾರು ಭಕ್ತರು ಬರುವುದರಿಂದ ಘನತ್ಯಾಜ್ಯ ನಿರ್ವಹಣೆ ಮಾಡಲು ಪ್ರತ್ಯೇಕ ಘಟಕ ಸ್ಥಾಪನೆಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಸಿರು ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಎಚ್.ಎಲ್.ನಾಗರಾಜ್, ಕೆರೆ, ಕಟ್ಟೆಗಳು ನಿಜವಾದ ದೇವರು. ಅವುಗಳನ್ನು ಸಂರಕ್ಷಿಸಿ ಪೋಷಣೆ ಮಾಡುವುದೇ ನಿಜವಾದ ಪೂಜೆ. ಗ್ರಾಮೀಣ ಜನರು ತಮ್ಮ ಊರುಗಳಲ್ಲಿರುವ ಕೆರೆ, ಕಟ್ಟೆಗಳನ್ನು ಶ್ರಮದಾನದ ಮೂಲಕ ಪುನಶ್ಚೇತನಗೊಳಿಸಲು ಮುಂದಾಗಬೇಕು. ಇದಕ್ಕೆ ಬೇಕಾದ ಸಲಹೆ, ಸಹಕಾರವನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ದೇಗುಲದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೆರೆಗಳಿಗೆ ತ್ಯಾಜ್ಯ ಸುರಿಯದೇ ಪಾವಿತ್ರ್ಯತೆ ಉಳಿಸಬೇಕೆಂದು ಕೋರಿದರು.

ಪ್ರೌಢಶಾಲೆಗಳಲ್ಲಿನ ಇಕೋ ಕ್ಲಬ್‍ಗಳನ್ನು ಗುರಿಯಾಗಿರಿಸಿಕೊಂಡು ಪರಿಸರದ ಬಗ್ಗೆ ತರಬೇತಿ ನೀಡಿ. ಇಬ್ಬರು ವಿದ್ಯಾರ್ಥಿಗಳನ್ನು ಮಾಸ್ಟರ್ ಟ್ರೈನರ್‌ಗಳಾಗಿ ಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಶ್ರೀನಿವಾಸಯ್ಯ ಮಾತನಾಡಿ, ಸಮುದಾಯದ ಭಾಗವಹಿಸುವಿಕೆಯಿಂದ ಮಾತ್ರ ಪರಿಸರ ಕಾಳಜಿಯುಳ್ಳ ಕೆಲಸಗಳು ಯಶಸ್ವಿಯಾಗುತ್ತವೆ. ಅಧಿಕಾರಿಗಳಾದ ಇಂತಹ ಚಟುವಟಿಕೆಗಳಲ್ಲಿ ವ್ಯಯಕ್ತಿಕವಾಗಿ ಭಾಗವಹಿಸುವುದರಿಂದ ಸಾರ್ವಜನಿಕರಿಗೂ ಪ್ರೇರಣೆ ನೀಡಿದಂತಾಗುವುದು ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಶಿವಶಂಕರಪ್ಪ ಅವರು ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜಲ ಸಂರಕ್ಷಣೆ ಕಾರ್ಯ ಚಟುವಟಿಕೆ ತಿಳಿಸಿದರು.

ದೊಡ್ಡಕೊಂಡಗುಳ ಗ್ರಾಮದ ಧನಂಜಯ್ ಅವರು, ಪ್ರತಿಷ್ಠಾನವು ತಮ್ಮ ಗ್ರಾಮ ಆಯ್ಕೆ ಮಾಡಿಕೊಂಡು ಎರಡು ಕಲ್ಯಾಣಿ ಹಾಗೂ 1 ಕೆರೆ ಪುನಶ್ಚೇತನಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅದೇ ರೀತಿ ಜವೇನಹಳ್ಳಿ ಸಂಗಮೇಶ್ವರ ಬಡಾವಣೆಯ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಪ್ರತಿಷ್ಠಾನದ ಕಾರ್ಯದರ್ಶಿ ರಾಜೀವ್‍ಗೌಡ, ಖಜಾಂಚಿ ಡಾ.ಮಂಜುನಾಥ್, ವೈದ್ಯಕೀಯ ಮಹಾವಿದ್ಯಾಲಯದ ಸ್ವಯಂ ಸೇವಾ ಸಂಸ್ಥೆಯ ವಿದ್ಯಾರ್ಥಿಗಳು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಕಂದಾಯ ಇಲಾಖೆ ನೌಕರರು , ದಾನಿಗಳಾದ ಸುಜಾತ ನಾರಾಯಣ್, ಟ್ರಸ್ಟಿಗಳಾದ ಪ್ರೊ.ತಿಮ್ಮೆಶ್, ಅಪ್ಪಾಜಿಗೌಡ, ಪುಟ್ಟಯ್ಯ, ವೆಂಕಟೇಗೌಡ ಹಾಜರಿದ್ದರು.

ಸೌಭಾಗ್ಯ ಪ್ರಾರ್ಥಿಸಿದರು, ಶಿಕ್ಷಕಿ ಮಮತಾ ಪಡುವಳಲು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.