ಹೊಳೆನರಸೀಪುರ: ಕಾರ್ಮಿಕ ಇಲಾಖೆ ನೀಡುತ್ತಿರುವ ಸೌಲಭ್ಯಗಳು ಗ್ರಾಮೀಣ ಭಾಗದ ಕಾರ್ಮಿಕರಿಗೂ ದೊರೆಯಬೇಕು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸೌಲಭ್ಯಗಳನ್ನು ಎಲ್ಲ ವರ್ಗದ ಕೂಲಿ ಕಾರ್ಮಿಕರಿಗೂ ತಲುಪಿಸಿ ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ಕಾರ್ಮಿಕ ಇಲಾಖೆ ಅಧಿಕಾರಿ ಎ.ಎಸ್. ಯಮುನಾ ಅವರಿಗೆ ಸೂಚಿಸಿದರು.
ಬಾಲಕಿಯರ ಪದವಿಪೂರ್ವ ಸರ್ಕಾರಿ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ನೀಡಿದ್ದ ವಿವಿಧ ಸಲಕರಣಾ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
‘ಇಲಾಖೆಯು ಕಾರ್ಮಿಕರ ಒಳಿತಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಹಲವು ಸವಲತ್ತನ್ನು ನೀಡುತ್ತಿದೆ. ಕಟ್ಟಡ ನಿರ್ಮಾಣ ಹಾಗೂ ಇತರೆ ಕೆಲಸಗಳಲ್ಲಿ ಕಾರ್ಮಿಕರ ಪಾತ್ರ ಗಣನೀಯವಾಗಿದ್ದು, ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, 70 ಕಾರ್ಮಿಕರಿಗೆ ಇಂದು ಕಿಟ್‍ಗಳನ್ನು ನೀಡಿದ್ದೇವೆ’ ಎಂದರು.
ಬಾಲಕಿಯರ ಪ್ರೌಢಶಾಲೆ ಉಪ ಪ್ರಾಂಶುಪಾಲ ಕಾಳೇಗೌಡ, ಅರಕಲಗೂಡು ತಾಲ್ಲೂಕು ಕಾರ್ಮಿಕ ನಿರೀಕ್ಷಕ ರಘು, ಇಲಾಖೆಯ ಸಹಾಯಕ ಚಿದಾನಂದ, ಡಾ. ಅಂಬೇಡ್ಕರ್ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.