ಹಾಸನ: ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರಿನ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಭೂಕುಸಿತ ನಿರಂತರವಾಗಿದೆ. ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಮಣ್ಣು ಕುಸಿಯುತ್ತಲೇ ಇದ್ದು, ಪದೇ ಪದೇ ವಾಹನಗಳ ಸಂಚಾರ ಸ್ಥಗಿತವಾಗುತ್ತಿದೆ.
ಜುಲೈ 15 ರಂದು ಮೊದಲ ಬಾರಿಗೆ ಈ ಸ್ಥಳದಲ್ಲಿ ಭೂಕುಸಿತ ಉಂಟಾಗಿದ್ದು, ಇದುವರೆಗೆ ನಿರಂತರವಾಗಿ ಮುಂದುವರಿದಿದೆ. ಒಂದೇ ವಾರದಲ್ಲಿ ಎರಡು ಬಾರಿ ಹಲವಾರು ವಾಹನಗಳು ಮಣ್ಣಿನಡಿ ಸಿಲುಕಿ, ಸಂಕಷ್ಟ ಅನುಭವಿಸುವಂತಾಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗುತ್ತಿದ್ದು, ವಾಹನಗಳು ರಸ್ತೆಯಲ್ಲಿಯೇ ಉಳಿಯುವಂತಾಗಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ 500 ಮೀಟರ್‌ಗೂ ಹೆಚ್ಚು ಉದ್ದದ ಗುಡ್ಡವನ್ನು 90 ಡಿಗ್ರಿ ನೇರವಾಗಿ ಕತ್ತರಿಸಲಾಗಿದೆ. ಮೇಲ್ಭಾಗದಿಂದ ಧಾರಾಕಾರವಾಗಿ ಹರಿದು ಬರುವ ಮಳೆ ನೀರು, ತನ್ನೊಂದಿಗೆ ಗುಡ್ಡದ ಮಣ್ಣನ್ನೂ ಹೊತ್ತು ತರುತ್ತಿದೆ. ಇದರ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುವ ವಾಹನಗಳೂ ಅಲುಗಾಡುತ್ತಿವೆ.
ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲು ಸ್ಥಳದಲ್ಲಿ ಮೂರು ಜೆಸಿಬಿಗಳನ್ನು ನಿಯೋಜಿಸಲಾಗಿದೆ. ಕುಸಿದ ಮಣ್ಣನ್ನು ಅಲ್ಲಿಯೇ ಪಕ್ಕಕ್ಕೆ ಸರಿಸಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಆರಂಭಿಸಲಾಗುತ್ತದೆ. ಮತ್ತೆ ಅದೇ ಮಣ್ಣು ರಸ್ತೆಗೆ ಹರಿದು ಬರುತ್ತಿದೆ. ಹೀಗಾಗಿ ಪದೇ ಪದೇ ವಾಹನಗಳ ಸಂಚಾರ ಸ್ಥಗಿತಗೊಳ್ಳುವಂತಾಗಿದೆ ಎನ್ನುವುದು ಸ್ಥಳೀಯರ ದೂರು.
ಬೆಟ್ಟದಿಂದ ಕುಸಿದಿರುವ ಮಣ್ಣನ್ನು ಬೇರೆಡೆ ಸ್ಥಳಾಂತರಿಸಿದಲ್ಲಿ, ರಸ್ತೆಗೆ ಹರಿದು ಬರುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ, ಇಲ್ಲಿನ ಮಣ್ಣು ಸ್ಥಳಾಂತರಿಸುವುದಕ್ಕೆ ನಿರಂತರ ಮಳೆ ಅಡ್ಡಿಯಾಗಿದೆ ಎನ್ನುವುದು ಗುತ್ತಿಗೆದಾರ ಕಂಪನಿಯ ಎಂಜಿನಿಯರ್‌ಗಳು ಹೇಳುವ ಮಾತು.
ವಾಣಿಜ್ಯ ವಹಿವಾಟಿಗೆ ತೊಂದರೆ: ಬೆಂಗಳೂರಿನಿಂದ ಮಂಗಳೂರಿನ ಬಂದರಿಗೆ ಸಾಮಗ್ರಿಗಳನ್ನು ಹೊತ್ತು ಬರುವ ಲಾರಿಗಳು, ಮಂಗಳೂರಿನಿಂದ ಬೆಂಗಳೂರಿನ ಅಡುಗೆ ಅನಿಲ ಸಾಗಿಸುವ ಟ್ಯಾಂಕರ್‌ಗಳಿಗೆ ಇದೊಂದೇ ಮಾರ್ಗವಾಗಿದೆ. ಆದರೆ, ಈ ಮಾರ್ಗದಲ್ಲಿಯೇ 2–3 ದಿನಗಳ ಕಾಲ ನಿಲ್ಲುವಂತಾಗಿದ್ದು, ವಾಣಿಜ್ಯ, ವಹಿವಾಟಿಗೂ ತೊಂದರೆ ಎದುರಾಗಿದೆ.
‘ಮಂಗಳೂರು ಬಂದರಿಗೆ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ಎರಡು ದಿನಗಳಿಂದ ಲಾರಿಗಳು ನಿಂತಲ್ಲಿಯೇ ನಿಂತಿವೆ. ಬಂದರಿನಲ್ಲಿ ಹಡಗಿಗೆ ಸಾಮಗ್ರಿಗಳನ್ನು ಹಾಕಬೇಕು. ನಮಗೆ ಪದೇ ಪದೇ ಕರೆಗಳು ಬರುತ್ತಿವೆ. ಆದರೆ, ಇಲ್ಲಿಂದ ಅಲುಗಾಡುವುದಕ್ಕೂ ಆಗುತ್ತಿಲ್ಲ’ ಎಂದು ಬೆಂಗಳೂರಿನಿಂದ ಬಂದಿದ್ದ ಕಂಟೈನರ್ ಚಾಲಕ ಸುದರ್ಶನ್ ಅಲವತ್ತಿಕೊಂಡರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಭೇಟಿ
ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಗುತ್ತಿಗೆದಾರ ಕಂಪನಿಯ ಎಂಜಿನಿಯರ್‌ಗಳ ಜೊತೆಗೆ ಚರ್ಚೆ ನಡೆಸಿದರು. 'ಭೂಕುಸಿತ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸುರಕ್ಷಿತವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸೂಚನೆ ನೀಡಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂ ಮೊಬೈಲ್‌ನಲ್ಲಿ ಮಾತನಾಡಿದ ಅವರು ಈ ಸ್ಥಳದಲ್ಲಿ ಕೈಗೊಳ್ಳಬೇಕಿರುವ ತುರ್ತು ಕ್ರಮಗಳ ಬಗ್ಗೆ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.