ADVERTISEMENT

ಕಳೆದ ಬಾರಿ 1,069, ಈ ಬಾರಿ 135 ಅರ್ಜಿ

ಜಿಲ್ಲಾ ಮಟ್ಟದ ಜನಸ್ಪಂದನ: ಅರ್ಜಿಗಳ ವಿಲೇವಾರಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:31 IST
Last Updated 21 ಡಿಸೆಂಬರ್ 2025, 4:31 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸಾರ್ವಜನಿಕರ ಅಹವಾಲು ಆಲಿಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸಾರ್ವಜನಿಕರ ಅಹವಾಲು ಆಲಿಸಿದರು.   

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿರುವ 1,069 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕುರಿತು ವರದಿ ನೀಡಬೇಕು. ಜೊತೆಗೆ ಈಗ ಸ್ವೀಕರಿಸಿರುವ 135 ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರ ಸ್ವಂತ ಜಮೀನು ಒತ್ತುವರಿ ಆಗಿದ್ದಲ್ಲಿ ನ್ಯಾಯಾಲಯದ ನಿರ್ದೇಶನವಿದ್ದರೆ ಮಾತ್ರ ಬಿಡಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

20 ವರ್ಷದಿಂದ ಪಡಿತರ ಚೀಟಿ ಹೊಂದಿದ್ದು, ಆದಾಯ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿರುವುದರಿಂದ 5 ವರ್ಷದಿಂದ ಪಡಿತರ ಚೀಟಿ ರದ್ದಾಗಿದೆ ಎಂಬ ಅಹವಾಲು ಸ್ವೀಕರಿಸಿದ ಅವರು, ಇದನ್ನು ಸರಿಪಡಿಸಲು ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ADVERTISEMENT

ಅರಕಲಗೂಡು ತಾಲ್ಲೂಕಿನ ಮಾದಿಹಳ್ಳಿಯಲ್ಲಿ ಏತ ನೀರಾವರಿಗೆ ಭೂಸ್ವಾಧೀನವಾಗಿದ್ದು, ಪರಿಹಾರ ಕೋರಿ ಬಂದ ಮನವಿಗೆ ಸ್ಪಂದಿಸಿದ ಅವರು, ಖುದ್ದು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ ಅವರು, ವಿದ್ಯುತ್ ಮಾರ್ಗ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಸೂಚಿಸಿದರು.

ಕಟ್ಟಾಯ ಗ್ರಾಮದಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು, ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಅಂತಿಮ ಬಿಲ್ ಹಣ ಪಾವತಿ ಮಾಡುವಂತೆ ಸೂಚಿಸಿದ ಅವರು, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್ ಹಾಕಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಹೆಚ್ಚುವರಿ ವರಿಷ್ಠಾಧಿಕಾರಿ ತಮ್ಮಯ್ಯ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.