ADVERTISEMENT

ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು ಅಗತ್ಯ: ಪ್ರಕಾಶ್ ಕಮ್ಮರಡಿ ಪ್ರತಿಪಾದನೆ

ಕೃಷಿ ಆರ್ಥಿಕ ತಜ್ಞ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 14:32 IST
Last Updated 1 ಅಕ್ಟೋಬರ್ 2021, 14:32 IST
ಹಾಸನದಲ್ಲಿ ಏರ್ಪಡಿಸಿದ್ದ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಆರ್ಥಿಕ ತಜ್ಞ ಟಿ.ಎನ್.ಪ್ರಕಾಶ್‌ ಕಮ್ಮರಡಿ ಮಾತನಾಡಿದರು. ರೈತ ಸಂತೆಶಿವರ ಬಸವರಾಜು, ಬಿ.ಕೆ.ಮಂಜುನಾಥ್‌ ಇದ್ದಾರೆ.
ಹಾಸನದಲ್ಲಿ ಏರ್ಪಡಿಸಿದ್ದ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಆರ್ಥಿಕ ತಜ್ಞ ಟಿ.ಎನ್.ಪ್ರಕಾಶ್‌ ಕಮ್ಮರಡಿ ಮಾತನಾಡಿದರು. ರೈತ ಸಂತೆಶಿವರ ಬಸವರಾಜು, ಬಿ.ಕೆ.ಮಂಜುನಾಥ್‌ ಇದ್ದಾರೆ.   

ಹಾಸನ: ’ರೈತರ ಉಳಿವಿಗಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು
ಜಾರಿಗೊಳಿಸುವುದು ಅತ್ಯಗತ್ಯ ಎಂದು ಕೃಷಿ ಆರ್ಥಿಕ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಪ್ರತಿಪಾದಿಸಿದರು.

ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದಕೃಷಿ ವಿಚಾರಗೋಷ್ಠಿ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ‘ರೈತರ ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಶಾಸನಬದ್ಧ ವ್ಯವಸ್ಥೆ’ ವಿಷಯ ಕುರಿತು ವಿಚಾರ ಮಂಡಿಸಿದರು.

ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ 50 ರಷ್ಟು ದರ ಸೇರಿಸಿ ಕನಿಷ್ಠ ಬೆಂಬಲ ಬೆಲೆನಿಗದಿಪಡಿಸಬೇಕೆಂದು ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ನೀಡಿರುವ ಶಿಫಾರಸ್ಸನ್ನು ಆಧಾರವಾಗಿಟ್ಟುಕೊಂಡು ಕಾನೂನಿನ ಮೂಲಕ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಎಂದುಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

ಕೊರೊನಾ ಸೋಂಕು ನಿಯಂತ್ರಿಸಲು ಗಮನ ಕೊಡಬೇಕಾದ ಸರ್ಕಾರ, ಕೃಷಿ ಕ್ಷೇತ್ರದ ಕಡೆ ಕಣ್ಣು ಹಾಕಿರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ತರುವ ಅಗತ್ಯವಾದರೂ ಏನಿತ್ತು?, ಈ ಕಾಯ್ದೆಗಳು ಅನುಷ್ಠಾನಗೊಂಡರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯೇ ಇಲ್ಲವಾಗಲಿದೆ ಎಂಬುದು ರೈತರಿಗೆ ಮನವರಿಕೆಯಾಗಿದೆ. ಹಾಗಾಗಿ ರೈತರು ಹನ್ನೊಂದು ತಿಂಗಳಿಂದ ಪಟ್ಟು ಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದುತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದರೂ, ಅದನ್ನು ಸುಧಾರಿಸುವಅವಕಾಶಗಳಿವೆ. ಎಪಿಎಂಸಿ ಕಡೆಗಣಿಸಿ ಮುಕ್ತವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಅವಕಾಶಮಾಡಿಕೊಟ್ಟರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.

ಕರ್ನಾಟಕ ಸರ್ಕಾರ ಸಹ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರಲ್ಲದವರೂ 108ಎಕರೆವರೆಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದೆ. ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರಕೃಷಿ ಭೂಮಿಯು ಬೃಹತ್ ಕಂಪನಿಗಳು, ಬಂಡವಾಳಶಾಹಿಗಳ ಪಾಲಾಗಲಿದೆ. ಈ ತಿದ್ದುಪಡಿ ಕಾಯ್ದೆಜಾರಿಗೊಂಡ ನಂತರ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಭೂ ನೋಂದಣಿ ವ್ಯವಹಾರಗಳುಶೇಕಡಾ 62 ರಷ್ಟು ಹೆಚ್ಚಿರುವುದಾಗಿ ವರದಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಪೆಟ್ರೋಲ್ ಬಂಕ್ ಸ್ಥಾಪಿಸುವ ಉದ್ದೇಶದಿಂದ ಪ್ರತಿ ಪೆಟ್ರೋಲ್ ಬಂಕ್ಸ್ಥಳದಲ್ಲಿ 4-5 ಎಕರೆ ಭೂಮಿಯನ್ನು ಬಹಳ ಕಡಿಮೆ ಬೆಲೆಗೆ ರಿಲಾಯನ್ಸ್ ಕಂಪನಿ ಖರೀದಿಸಿದೆ. ಅಂಬಾನಿ, ಅದಾನಿ ಮತ್ತು ಬಾಬಾ ರಾಮದೇವ ಅವರು ಬೇರೆ ಬೇರೆ ವ್ಯವಹಾರದ ಹೆಸರಲ್ಲಿ ಕಡಿಮೆ ಬೆಲೆಗೆ ಭೂಮಿ ಖರೀದಿಸುತ್ತಿದ್ದಾರೆ. ಹೀಗಾಗಿಯೇ ಅವರ ಕಂಪನಿಗಳ ಮೌಲ್ಯ ವರ್ಷದಿಂದ ವರ್ಷಕ್ಕೆಹೆಚ್ಚುತ್ತಾ ಹೋಗುತ್ತಿದೆ ಎಂದರು.

ಪ್ರಗತಿಪರ ರೈತ ಸಂತೆಶಿವರ ಬಸವರಾಜು ಅವರು ‘ಸಾವಯವ ಮತ್ತು ಸಹಜ ಕೃಷಿ’ ಕುರಿತುಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಾ.ವೈ.ಎಸ್. ವೀರಭದ್ರಪ್ಪ,ಚಂದ್ರೇಗೌಡ, ಬಿ.ವಿ. ಕರೀಗೌಡ, ಎಚ್‍ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೊದ್ದು ಸುಬ್ರಹ್ಮಣ್ಯ, ಜಯಲಕ್ಷ್ಮಿ ರಾಜಣ್ಣಗೌಡ, ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್, ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಕುಮಾರ್, ಡಾ. ದಿನೇಶ್ ಭೈರೇಗೌಡ, ಪತ್ರಕರ್ತರಾದ ಎಸ್.ಎನ್. ಮಂಜುನಾಥ ದತ್ತ, ಆರ್.ಪಿ. ವೆಂಕಟೇಶಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.