ADVERTISEMENT

‘ವಕೀಲ ಸಮಾಜ ಪರಿವರ್ತನೆಯ ಎಂಜಿನಿಯರ್‌’

ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:54 IST
Last Updated 6 ಡಿಸೆಂಬರ್ 2021, 4:54 IST
ಹಾಸನದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ಹಿರಿಯ ವಕೀಲರಾದ ನಾಗೇಂದ್ರಯ್ಯ, ಜಯರಾಮಶೆಟ್ಟಿ, ಆರ್.ಟಿ. ದ್ಯಾವೇಗೌಡ, ಆರ್. ಚನ್ನಬಸವಯ್ಯ, ಜಿ.ಎಚ್. ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್, ಎಚ್.ಪಿ. ಸಂದೇಶ್, ರಿಜಿಸ್ಟಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಹಾಗೂ ಇದ್ದರು‌
ಹಾಸನದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ಹಿರಿಯ ವಕೀಲರಾದ ನಾಗೇಂದ್ರಯ್ಯ, ಜಯರಾಮಶೆಟ್ಟಿ, ಆರ್.ಟಿ. ದ್ಯಾವೇಗೌಡ, ಆರ್. ಚನ್ನಬಸವಯ್ಯ, ಜಿ.ಎಚ್. ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್, ಎಚ್.ಪಿ. ಸಂದೇಶ್, ರಿಜಿಸ್ಟಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಹಾಗೂ ಇದ್ದರು‌   

ಹಾಸನ: ‘ವಕೀಲರು ಸಮಾಜವನ್ನು ಪರಿವರ್ತನೆ ಮಾಡುವ ಎಂಜಿನಿಯರ್‌ ಗಳಿದ್ದಂತೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನೂತನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿದ ಅವರು, ‘ವಕೀಲರು ಎಂದರೇ ಸಮಾಜದ ರೂವಾರಿ. ಒಬ್ಬ ವಕೀಲನ ಸಂಪರ್ಕಕ್ಕೆ ಸಮಾಜದ ಎಲ್ಲಾ ತರದ ವ್ಯಕ್ತಿಗಳು ಬರುತ್ತಾರೆ. ಅದರಂತೆ ಸಮಾಜದ ಎಲ್ಲಾ ಸಮಸ್ಯೆಗಳ ಬಗ್ಗೆ ಅರ್ಥವಾಗುತ್ತ ತಾನಾಗೆ ಸಮಾಜದ ನಾಯಕನಾಗಿ ರೂಪಗೊಳ್ಳುತ್ತಾನೆ. ಕಾಲ ಕ್ರಮೇಣ ಸಮಾಜದ ಬದಲಾವಣೆಗೆ ಕಾರಣಕರ್ತ ನಾಗುತ್ತಾನೆ’ ಎಂದು ಹೇಳಿದರು.

‘ಮನುಷ್ಯನಿಗೆ ಮೂಲಭೂತ ಹಕ್ಕು ಎಷ್ಟು ಮುಖ್ಯವೋ ಹಾಗೆಯೇ ಕರ್ತವ್ಯಗಳು ಅಷ್ಟೇ ಮುಖ್ಯ’ ಎಂದರು.

ADVERTISEMENT

ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮಾತನಾಡಿ, ‘ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದಾಗ, ಹಕ್ಕಿಗೆ ಚ್ಯುತಿ ಬಂದಾಗ ನ್ಯಾಯ ಕೊಡಿಸುವುದು ವಕೀಲರ ಕೆಲಸ. ಸಂವಿಧಾನ ರಚನೆ ವೇಳೆ ಭೂಮಿ ಮೇಲಿರುವ ಪ್ರತಿಯೊಬ್ಬ ಪ್ರಜೆಯು ಮೂಲಭೂತ ಹಕ್ಕಿನಿಂದ ವಂಚಿತರಾಗ ಬಾರದು ಎಂಬ ಉದ್ದೇಶದಲ್ಲಿ ಶ್ರಮವಹಿಸಿದ್ದಾರೆ. ಕಲ್ಯಾಣ ರಾಜ್ಯ ಕಟ್ಟಲು ನಮ್ಮ ಇತಿಮಿತಿ ಯಲ್ಲಿ ಕೆಲಸ ಮಾಡುವುದು ಶ್ರೇಷ್ಠ. ಧರ್ಮ ಧರ್ಮಗಳನ್ನು ಒಡೆಯುವುದಲ್ಲ. ಎಲ್ಲಾ ಧರ್ಮದ ಉದ್ದೇಶ ಎಲ್ಲರಿಗೂ ಒಳ್ಳೆಯದನ್ನು ಮಾಡುವುದೇ ಆಗಿದೆ’ ಎಂದು ಹೇಳಿದರು.

‘ವಕೀಲರಲ್ಲಿ ಪ್ರಾಮಾಣಿಕತೆ ಇರಬೇಕು. ಹಿರಿಯ ವಕೀಲರ ಜೊತೆ ಕಲಿಯಲು ಹೋದಾಗ ಯುವ ವಕೀಲರು ಹಣದ ಕಡೆ ಗಮನಕೊಡುವುದು ಮುಖ್ಯವಲ್ಲ. ಒಂದು ಪ್ರಕರಣದ ಬಗ್ಗೆ ವಾದ ಮಾಡಲು ಚಾಕಚಕ್ಯತೆ ಇರಬೇಕು. ಎಲ್ಲಿ ಮನುಷ್ಯನಿಗೆ ವ್ಯಾಮೋಹವಿರುತ್ತದೆ ಅಲ್ಲಿ ಮರ್ಯಾದೆ ಕೂಡ ಇರುವುದಿಲ್ಲ’ ಎಂದರು.

ಹಿರಿಯ ವಕೀಲರಾದ ನಾಗೇಂದ್ರಯ್ಯ, ಜಯರಾಮಶೆಟ್ಟಿ, ಆರ್.ಟಿ. ದ್ಯಾವೇಗೌಡ, ಆರ್. ಚನ್ನಬಸವಯ್ಯ, ಜಿ.ಎಚ್. ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.

ಹೈಕೋರ್ಟ್ ರಿಜಿಸ್ಟಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮೂರ್ತಿ, ರಾಜ್ಯ ವಕೀಲರ ಪರಿಷತ್ತು ಸದಸ್ಯ ಎಂ.ಎನ್. ಮಧುಸೂದನ್, ಎಚ್.ಎಲ್. ವಿಶಾಲ್ ರಘು, ಮಿಠಲ್ ಕೋಡ್ ಸಿದ್ದಲಿಂಗಪ್ಪ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮೋಹನ್ ಕುಮಾರ್, ಉಪಾಧ್ಯಕ್ಷ ಎಚ್.ಆರ್. ರಂಗನಾಥ್, ಖಜಾಂಚಿ ನಾಗೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ತುಳಸಿ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.