ADVERTISEMENT

ಹೊಳೆನರಸೀಪುರ | 'ಸಮಾಧಾನಕರ ತೀರ್ಪು; ವೈಮನಸ್ಸು ದೂರ'

ಕಾಯಂ ಜನತಾ ನ್ಯಾಯಾಲಯ ಅರಿವು ಕಾರ್ಯಕ್ರಮದಲ್ಲಿ ನ್ಯಾ. ಐಶ್ವರ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 3:15 IST
Last Updated 13 ಸೆಪ್ಟೆಂಬರ್ 2025, 3:15 IST
ಹೊಳೆನರಸೀಪುರದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಎಸ್. ಗುಡದಿನ್ನಿ ಮಾತನಾಡಿದರು
ಹೊಳೆನರಸೀಪುರದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಎಸ್. ಗುಡದಿನ್ನಿ ಮಾತನಾಡಿದರು   

ಹೊಳೆನರಸೀಪುರ: ಜನತಾ ನ್ಯಾಯಾಲಯದಲ್ಲಿ ವಾದಿ, ಪ್ರತಿವಾದಿಗಳ ಉಪಸ್ಥಿತಿಯಲ್ಲಿ ಸಮಸ್ಯೆ ಆಲಿಸಿ, ಅವರಿಗೆ ಪರವಾದ ವಿಷಯ ಮತ್ತು ಸಮಸ್ಯೆ ವಿವರಿಸಿ, ಸಮಾಧಾನಕರ ತೀರ್ಪು ನೀಡುವುದರಿಂದ ಇಬ್ಬರಲ್ಲಿಯೂ ಒಮ್ಮತ್ತ ಇರುತ್ತದೆ. ವೈಮನಸ್ಸು ದೂರವಾಗಿ ಸಂಬಂಧ ಉಳಿಯುತ್ತದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಎಸ್. ಗುಡದಿನ್ನಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಸಾಕ್ಷಿ ಮತ್ತು ಸನ್ನಿವೇಶವನ್ನು ಗುರುತಿಸಿ, ನ್ಯಾಯ ಪರವಾಗಿ ತೀರ್ಪು ನೀಡಿದ್ದರೂ, ಒಬ್ಬರ ಪರವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಿವಿಲ್ ವ್ಯಾಜ್ಯದ ಸಮಸ್ಯೆ ಉಲ್ಪಣಗೊಂಡು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವುದನ್ನು ಕಂಡಿದ್ದೇವೆ. ಇಂತಹ ಸಂದರ್ಭಗಳಲ್ಲಿ ಜನತಾ ನ್ಯಾಯಾಲಯದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವುದು ಕುಟುಂಬಗಳಲ್ಲಿ ಅಗತ್ಯವಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಲ್ಲೂಕು ಕಾನೂನು ಸೇವಾ ಸಮಿತಿ ಪ್ಯಾನಲ್ ವಕೀಲ ಕೆ.ಎಸ್. ಶೇಖರಪ್ಪ ಮಾತನಾಡಿ, ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ವ್ಯವಸ್ಥೆ ಕಾಯಂ ಜನತಾ ಅದಾಲತ್ ಆಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಬೇಕಾಗಿದೆ. ಇಂದು ಪ್ರತಿ ವಿಚಾರಕ್ಕೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬರುತ್ತಾರೆ. ಜನರ ಕ್ಲಿಷ್ಟಕರ ಸಮಸ್ಯೆ, ದಾವೆಗಳನ್ನು ಸುಲಭ ಪ್ರಕ್ರಿಯೆಗಳ ಮೂಲಕ ಇತ್ಯರ್ಥಪಡಿಸುವುದು ನ್ಯಾಯಾಂಗದ ಉದ್ದೇಶ. ಹಾಗಾಗಿ ಸಾರ್ವಜನಿಕರು ಇದರ ಪ್ರಯೋಜನೆ ಪಡೆಯಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6 ಕಾಯಂ ಜನತಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು, ಹಾಸನ ಜಿಲ್ಲೆಯವರು ಸಂಬಂಧಿತ ಮೈಸೂರಿನ ಕಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್ ಮಾತನಾಡಿದರು. ಪುರಸಭೆ ಅಧಿಕಾರಿ ರಮೇಶ್ ಸ್ವಾಗತಿಸಿ, ವಂದಿಸಿದರು. ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಯು.ಆರ್. ಸತೀಶ್, ವಕೀಲ ಎಚ್.ಟಿ.ರಾಜಶೇಖರ್ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.