ಹಾಸನ: ‘ಸಿದ್ದರಾಮಯ್ಯ ಅವರೇ ಐದು ವರ್ಷಗಳವರೆಗೆ ಮುಖ್ಯಮಂತ್ರಿ ಅಗಿರುತ್ತಾರೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಲಿ. ಇಲ್ಲವೇ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರೇ ಪತ್ರಿಕಾಗೋಷ್ಠಿ ನಡೆಸಿ ತಿಳಿಸಲಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲು ಹಾಕಿದರು.
ಜಿಲ್ಲೆಯ ಆಲೂರು ತಾಲ್ಲೂಕಿನ ಧರ್ಮಪುರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಸ್ಪಷ್ಟಪಡಿಸಿಬಿಟ್ಟರೆ, ಅಶೋಕ್‌ನದ್ದು ಗಿಳಿಶಾಸ್ತ್ರನೂ ಇಲ್ಲ, ಕವಡೆ ಶಾಸ್ತ್ರನೂ ಇಲ್ಲ, ಎಲೆಶಾಸ್ತ್ರನೂ ಇಲ್ಲ ಎಂದುಕೊಂಡು ಬಿಟ್ಟು ಬಿಡುತ್ತೇನೆ’ ಎಂದರು.
‘ನಾನು ಹೇಳಿದ್ದು ನಿಜ ಆಗುತ್ತಿದೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರನ್ನು ದೆಹಲಿಗೆ ಎತ್ತಂಗಡಿ ಮಾಡಲು ಯೋಜನೆ ಸಿದ್ಧವಾಗಿದೆ. ಅವರು ಇಲ್ಲಿಯೇ ಇದ್ದರೆ ಕಿರುಕುಳ ನೀಡುತ್ತಾರೆ. ಸುಮ್ಮನೆ ಮನೆಯಲ್ಲಿ ಕೂರಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಅವರೇ ಎಲ್ಲರನ್ನೂ ಬಿಜೆಪಿ ಹೋಗಿ ಎಂದು ಕಳುಹಿಸಿ, ವಿರೋಧ ಪಕ್ಷದ ನಾಯಕನಾಗಿ ಆರಾಮಾಗಿದ್ದರು’ ಎಂದು ಟೀಕಿಸಿದರು.
‘ಹಾಸನದಲ್ಲಿ ಹೃದಯಾಘಾತದಿಂದ ಜನ ಸಾಯುತ್ತಿದ್ದಾರೆ. ಮೆಕ್ಕೆಜೋಳಕ್ಕೆ ರೋಗ ಬಂದು ರೈತರು ತತ್ತರಿಸಿದ್ದಾರೆ. ಆದರೆ, ಸರ್ಕಾರ ಎಚ್ಚರ ತಪ್ಪಿದ್ದು, ಕೋಮಾ ಸ್ಥಿತಿಯಲ್ಲಿದೆ’ ಎಂದು ದೂರಿದರು.
‘ಅಧಿಕಾರ ಹಸ್ತಾಂತರ, ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು, ಎಟಿಎಂ ತೆಗೆದುಕೊಂಡು ದೆಹಲಿಗೆ ಯಾರ‍್ಯಾರಿಗೆ ಎಷ್ಟೆಷ್ಟು ಕೊಡಬೇಕು, ಇದೇ ಮಂತ್ರಿಗಳನ್ನು ಇಡುತ್ತಾರಾ, ಬೇರೆಯವರಿಗೆ ಕೊಡುತ್ತಾರಾ, ಸಚಿವ ಸ್ಥಾನದ ಬೆಲೆ ಎಷ್ಟು? ಎಂಬುದರಲ್ಲೇ ಇಡೀ ಸರ್ಕಾರ ಮುಳುಗಿದೆ. ಜನರು ಕಂಗಾಲಾಗಿದ್ದಾರೆ’ ಎಂದು ಆಪಾದಿಸಿದರು.
‘ಯಾರಾದರೂ ಮುಖ್ಯಮಂತ್ರಿ ಆಗಲಿ, ನಾವಂತೂ ಈ ಸರ್ಕಾರ ಬೀಳಿಸಲು ಹೋಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.