ಹಾಸನ: ‘ಎಲ್ಲರೂ ಒಟ್ಟಿಗೆ ಸೇರೋಣ, ಸಂವಾದ ಮಾಡೋಣ, ಪರಿಸ್ಥಿತಿಗಳನ್ನು ವಿಶ್ಲೇಷಣೆ ಮಾಡೋಣ, ಪ್ರಶ್ನೆಗಳನ್ನು ಕೇಳೋಣ, ಬರೆಯೋಣ, ಆ ಮೂಲಕ ಸಂಸ್ಕೃತಿ, ಮನಸ್ಸು ಗಟ್ಟಿ ಮಾಡಿಕೊಳ್ಳುತ್ತ ಸೌಹಾರ್ದದ ಬದುಕು ಬಾಳೋಣ. ಅದಕ್ಕೆ ಸಾಹಿತ್ಯ ರಹದಾರಿಯಾಗಲಿ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೊಂದು ಅದ್ಭುತ ಗಳಿಗೆ. ಈ ಗೌರವ ನನಗೆ ಮಾತ್ರ ಸಂದದ್ದಲ್ಲ. ನನ್ನ ಕತೆಗಳಿಗೆ ಜೀವ ತುಂಬಿದ ನಗರ, ನಿಮ್ಮ ಒಡನಾಟದಿಂದ ರೂಪಗೊಂಡ ಸಾಹಿತ್ಯಕ್ಕೆ ಸಂದಿದೆ. ನಿಮ್ಮೆಲ್ಲರ ಜೊತೆ ಸೇರಿ ಹೋರಾಡಿದ್ದೇವೆ. ಗಂಟಲು ಹರಿಯುವಂತೆ ಅರಚಿದ್ದೇವೆ. ಇದೆಲ್ಲ ಸಾಧ್ಯವಾದದ್ದು ನಗರದ ಬೀದಿಗಳಿಂದ, ನಿಮ್ಮೆಲ್ಲರ ಆತ್ಮವಿಶ್ವಾಸ, ಧೈರ್ಯ, ಒಡನಾಟದಿಂದ ಎಂದು ಹೇಳಿದರು.
ನನ್ನ ಬರವಣಿಗೆ ಒಂಟಿಯಾದುದಲ್ಲ. ಇದೊಂದು ಸಂವಾದ. ಇತಿಹಾಸ, ಮಾನವೀಯತೆ, ಹೇಳಲಾಗದ ಕಥೆಗಳೊಂದಿಗಿನ ಸಂವಾದ. ನಮ್ಮ ಗುರುತುಗಳ ಸಂಕೀರ್ಣತೆ ಅರ್ಥೈಸಲು, ಮೌನವನ್ನು ಮುರಿಯಲು, ದೈನಂದಿನ ಜೀವನದ ಅದ್ಭುತಗಳನ್ನು ಆಚರಿಸಲು ಬರೆಯುತ್ತಿದ್ದೇನೆ. ನನ್ನ ಬರವಣಿಗೆ ನಿಮ್ಮನ್ನು ಕದಡಿದರೆ, ನನ್ನ ಶ್ರಮ ಸಾರ್ಥಕವಾಯಿತು ಎಂದು ಅರ್ಥ ಎಂದರು.
ಈಚೆಗೆ ಸಂಸದೆ ಕನ್ನಿಮೊಳಿ ಹೊರದೇಶದಲ್ಲಿದ್ದರು. ‘ನಿಮ್ಮ ದೇಶದ ರಾಷ್ಟ್ರಭಾಷೆ ಯಾವುದು’ ಎಂದು ಅಲ್ಲಿನ ಪತ್ರಕರ್ತರು ಕೇಳಿದ್ದರು. ‘ಬಹುತ್ವ ಮತ್ತು ಸಹಿಷ್ಣುತೆ ನಮ್ಮ ರಾಷ್ಟ್ರಭಾಷೆ’ ಎಂದು ಕನ್ನಿಮೊಳಿ ಉತ್ತರ ಕೊಟ್ಟರು. ನನಗೂ ಇಂತಹ ಸಂದರ್ಭ ಎದುರಾಗಿದೆ ಎಂದರು.
‘ನೀವು ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆ. ನಿಮಗೆ ಭಾರತದಲ್ಲಿ ಬದುಕಲು ಕಷ್ಟವಾಗುತ್ತಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಹೇಳಿ’ ಎಂದು ಬಿಬಿಸಿ ಪತ್ರಕರ್ತರು ನನ್ನನ್ನು ಕೇಳಿದರು. ಅದಕ್ಕೆ ನಾನು ಹೇಳಿದೆ, ‘ನೀವು ದೇಶ ಬಿಡುವ ಸಂದರ್ಭದಲ್ಲಿ ಒಡೆದಾಳುವ ಬೀಜವನ್ನು ಬಿತ್ತಿ ಬಂದಿದ್ದೀರಿ. ಅದು ಈಗ ಫಲ ನೀಡುತ್ತಿದೆ’ ಎಂದು ಉತ್ತರ ಕೊಟ್ಟೆ’ ಎಂದು ಹೇಳಿದರು.
ಚಳವಳಿಯ ಧೈರ್ಯವೇ ಅಂಥದ್ದು. ಇದ್ದದ್ದನ್ನು ಇದ್ಹಂಗೆ ಹೇಳೋದು. ಇದು ಪ್ರಸಾರ ಆಗುವುದಿಲ್ಲವೇನೋ ಅಂದುಕೊಂಡಿದ್ದೇನೆ. ಆದರೆ, ಅದು ಪ್ರಸಾರವಾಯಿತು. ಹೊರಗಿದ್ದ ಅಲ್ಲಿನವರೂ ಅದನ್ನು ಸಂಭ್ರಮಿಸಿದರು ಎಂದರು.
ನನ್ನ ಸ್ನೇಹಿತೆಯೊಬ್ಬಳು ಕರೆ ಮಾಡಿದ್ದಳು. ನಾನು ಚಾಮುಂಡಿ ಬೆಟ್ಟದಲ್ಲಿ ಇದ್ದೇನೆ. ಅರ್ಚನೆ ಮಾಡಿಸುತ್ತಿದ್ದೇನೆ. ನಿಮ್ಮ ತಂದೆ–ತಾಯಿ ಹೆಸರು ಹೇಳಿ ಎಂದಳು. ನಾನು ಛೇಡಿಸಬೇಕು ಎಂದು ಸಾಬ್ರ ಹೆಸರು ಚಾಮುಂಡೇಶ್ವರಿ ಅರ್ಥ ಆಗುತ್ತೋ ಇಲ್ಲೊ ಬಿಡು ಎಂದೆ. ಅವಳೂ ತಮಾಷೆಯಾಗಿ ತೆಗೆದುಕೊಂಡು, ಅರ್ಥ ಆಗುತ್ತೆ ಬಿಡು, ಸಾಬ್ರ ಹೆಸರು ಕೊಟ್ಟಿದ್ದು ಅವಳೇ ಅಲ್ಲವೇ ಎಂದಳು.
ಸಾಹಿತ್ಯ, ಸಂಸ್ಕೃತಿ ಜನರನ್ನು ಒಟ್ಟುಗೂಡಿಸುತ್ತದೆ. ಸಾಂಸ್ಕೃತಿಕವಾಗಿ ಜನರನ್ನು ಬೆಸೆಯುವ ಜೊತೆಗೆ ಮೌಲ್ಯಪರ ನಿಲುವುಗಳನ್ನು ಬಿತ್ತುವ ಜವಾಬ್ದಾರಿ ಸಾಹಿತಿಗಳು, ಕಲಾವಿದರೂ ಸೇರಿದಂತೆ ಎಲ್ಲರಿಗೂ ಇದೆ. ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸೋಣ ಎಂದರು.
ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾ
ಉರ್ದು ಮಾತೃಭಾಷೆಯಾಗಿರುವ ಮಹಿಳೆ ಕನ್ನಡದಲ್ಲಿ ಬರೆದಿರುವ ಪುಸ್ತಕ, ಇಂಗ್ಲಿಷ್‌ಗೆ ಭಾಷಾಂತರವಾಗಿ ಪ್ರಶಸ್ತಿ ಪಡೆದಿದೆ. ಅಕ್ಷರಕ್ಕಾಗಿ ಸಂಭ್ರಮ ಪಡುವ ವಾತಾವರಣ ಅತ್ಯಂತ ಅದ್ಭುತವಾದುದು ಎಂದು ಅಭಿನಂದನಾ ಮಾತುಗಳನ್ನು ಆಡಿದ ಸಾಹಿತಿ ಡಾ.ಎಚ್.ಎಸ್. ಅನುಪಮಾ ಹೇಳಿದರು.
ಹಸೀನಾ ಮತ್ತು ಕತೆಗಳು ಕೃತಿಯಲ್ಲಿ ಒಟ್ಟು 47 ಕತೆಗಳಿದ್ದು, ಒಂದೊಂದು ಕತೆಗಳಿಗೂ ಒಂದೊಂದು ಕಾದಂಬರಿ ಮಾಡಬಹುದು. ಅಷ್ಟೊಂದು ವಿಚಾರಗಳನ್ನು ಒಳಗೊಂಡಿವೆ. ಅದರಲ್ಲಿ 12 ಕತೆಗಳು ಇಂಗ್ಲಿಷ್‌ಗೆ ಅನುವಾದ ಆಗಿವೆ ಎಂದರು.
ಚಳವಳಿಗಾರರನ್ನು ಕೇವಲ ಭಾಷಣಕ್ಕೆ ಕರೆಯಲಾಗುತ್ತದೆಯೇ ಹೊರತು, ನಮ್ಮ ಸಾಹಿತ್ಯಕ್ಕಾಗಿ ಅಲ್ಲ. ಇನ್ನಾದರೂ ಸಾಹಿತ್ಯದ ವಿಮರ್ಶೆ ಸರಿಯಾಗಿ ಆಗಲಿ. ಬದುಕು ಮತ್ತು ಹೋರಾಟ ಒಂದೇ ಆಗಿರುವ ಬಾನು ಮುಷ್ತಾಕ್ ಅವರ ವಿಸ್ಮಯವೇ ಬರವಣಿಗೆ ಎಂದರು.
ಕೌಟುಂಬಿಕ ಮಹಿಳೆಯಿಂದ ಸಾಮಾಜಿಕ ಮಹಿಳೆ ಆಗಬೇಕು, ಜಾಗೃತ ಪ್ರಜ್ಞೆ ಮೂಡಬೇಕು ಎನ್ನುವ ಆಶಯ ಅವರ ಕತೆಗಳಲ್ಲಿ ಕಾಣುತ್ತದೆ. ತಾರತಮ್ಯ ಯಾವ ನೆಲೆಗಳಲ್ಲಿ ಆಗಿದೆ ಎಂಬುದನ್ನು ಕತೆಗಳು ಬಿಂಬಿಸಿವೆ. ತಾರತಮ್ಯ ಸೃಷ್ಟಿಸಿದ ಜಗತ್ತಿನ ಆಳ ಅಗಲಗಳ ಅರಿವನ್ನು ಮೂಡಿಸಿವೆ. ಗೃಹಪಾತ್ರಗಳು ಹಾಗೂ ಪ್ರತಿರೋಧಗಳು ಕಾಣುತ್ತವೆ. ವೈಚಾರಿಕ ಮಾದರಿ ಇದೆ ಎಂದು ಹೇಳಿದರು.
ಎಲ್ಲರೂ ಅವರ ಕತೆಗಳನ್ನು ಓದುವ ಮೂಲಕ, ಅವುಗಳ ಬಗ್ಗೆ ಚರ್ಚೆ ಮಾಡಿದರೆ, ಅದುವೇ ಬಾನು ಮುಷ್ತಾಕ್ ಅವರಿಗೆ ಕೊಡುವ ದೊಡ್ಡ ಗೌರವ. ಬಾನು ಮುಷ್ತಾಕ್ ಅವರ ಆಶಯಗಳ ಜೊತೆಗೆ ನಿಲ್ಲೋಣ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.