ADVERTISEMENT

ಜೀವನ ಕೌಶಲ ಬೆಳೆಸುವ ಶಿಕ್ಷಣ ಅಗತ್ಯ

ಹಾಸನ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಓಬಳೇಶಘಟ್ಟಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 14:34 IST
Last Updated 13 ಫೆಬ್ರುವರಿ 2021, 14:34 IST
ಹಾಸನ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್‌.ಓಬಳೇಶಘಟ್ಟಿ ಅವರನ್ನು ಸಾರೋಟ್‌ನಲ್ಲಿ ಮೆರವಣಿಗೆ ಮಾಡಲಾಯಿತು.
ಹಾಸನ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್‌.ಓಬಳೇಶಘಟ್ಟಿ ಅವರನ್ನು ಸಾರೋಟ್‌ನಲ್ಲಿ ಮೆರವಣಿಗೆ ಮಾಡಲಾಯಿತು.   

ಹಾಸನ: ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ ವಿಚಾರ ಮತ್ತು ವಿವೇಕ ಶಿಕ್ಷಣ
ನೀಡಬೇಕು ಎಂದು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್‌.ಓಬಳೇಶಘಟ್ಟಿ
ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಆಯೋಜಿಸಿದ್ದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷತೆ ಭಾಷಣ ಮಾಡಿದ ಅವರು, ನೈತಿಕ ಜಾಗೃತಿ ಉಂಟು ಮಾಡುವ ಸಾಮಾಜಿಕ, ರಾಜಕೀಯ,
ಸಾಂಸ್ಕೃತಿಕ, ಧಾರ್ಮಿಕ ಶಿಕ್ಷಣ ನೀಡುವ ಜತೆಗೆ ಜೀವನ ಮೌಲ್ಯ ಮತ್ತು ಕೌಶಲ ಬೆಳೆಸುವ ಶಿಕ್ಷಣ ಪದ್ಧತಿ
ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ತಂತ್ರಜ್ಞಾನದ ಯುಗದಲ್ಲಿ ಮಾನವೀಯತೆ ದೂರವಿಟ್ಟು ಸ್ವಾರ್ಥ ಜೀವನಕ್ಕೆ ಮೊರೆ ಹೋಗುತ್ತಿದ್ದೇವೆ.
ವಿದ್ಯೆ, ವಿವೇಕ ಮತ್ತು ಪ್ರಾಮಾಣಿಕತೆಗೆ ಬೆಲೆಯಿಲ್ಲದೆ ಪರಿತಪಿಸುತ್ತಿದ್ದೇವೆ. ಇಂತಹ ಸಂರ್ಭದಲ್ಲಿ ಸಾಹಿತ್ಯ
ಮತ್ತು ಶಿಕ್ಷಣ ಮುಂಚೂಣಿಗೆ ಬರಬೇಕು. ಸಾಹಿತ್ಯ, ಶಿಕ್ಷಣ ದುರ್ಬಲವಾದರೆ ಸಾಮಾಜಿಕ ಸ್ವಾಸ್ಥ್ಯ
ಅಯೋಮಯವಾಗಲಿದೆ ಎಂದು ಎಚ್ಚರಿಸಿದರು.

ADVERTISEMENT

ಲೋಕದ ಡೊಂಕು ನಾನೇಕೆ ತಿದ್ದಬೇಕು ಎಂಬ ಮನೋಧೋರಣೆಯಿಂದ ಸಾಹಿತಿಗಳು, ಬೋಧಕರು
ಹೊರ ಬಂದು ಆರೋಗ್ಯಕರ ಸಮಾಜ ಕಟ್ಟಬೇಕು. ಸಾಹಿತ್ಯ ಮತ್ತು ಶಿಕ್ಷಣ ಕಲುಷಿತವಾಗದಂತೆ
ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌.ಪ್ರಮೀಳ ನಾಯ್ಡು ಮಾತನಾಡಿ, ಕನ್ನಡ ಗಟ್ಟಿಯಾಗಬೇಕಾದರೆ
ಸಾಹಿತ್ಯ ಮೂಲಕ ಸಾಧ್ಯ. ಹೆಚ್ಚು ಸಮ್ಮೇಳನ ಆಯೋಜಿಸಿ ಕನ್ನಡ ಭಾಷೆ ಗಟ್ಟಿಗೊಳಿಸಬೇಕು. ಯುವ
ಜನತೆ ಹೆಚ್ಚು ಪುಸ್ತಕಗಳನ್ನು ಓದಬೇಕು ಮತ್ತು ಲೇಖನಗಳನ್ನು ಬರೆಯಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಕನ್ನಡ ನಾಡು, ನುಡಿ ವಿಚಾರದಲ್ಲಿ
ಎಂದೂ ರಾಜಿ ಮಾಡಿಕೊಂಡಿಲ್ಲ. ಎಲ್ಲ ವರ್ಗದವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಲಾಗಿದೆ ಎಂದರು.

ಇದೇ ವೇಳೆ ಗೊರೂರು ಅನಂತರಾಜು ಅವರ "ಸನ್ಮಾನ ಪ್ರಶಸ್ತಿ ಪರಂತು' ಕೃತಿಯನ್ನು ಬಿಡುಗಡೆ
ಮಾಡಲಾಯಿತು. ದೊಡ್ಡಳ್ಳಿ ರಮೇಶ್ ಮತ್ತು ತಟ್ಟೆಕೆರೆ ಲಕ್ಷಣ ತಂಡದವರು ಜನಪದ ಗೀತ ಗಾಯನ
ನಡೆಸಿಕೊಟ್ಟರು. ಕನ್ನಡ ಸಾಹಿತ್ಯದಲ್ಲಿ ವರ್ತಮಾನದ ತಲ್ಲಣ ಕುರಿತ ವಿಚಾರ ಗೋಷ್ಠಿ ಮತ್ತು
ಕವಿಗೋಷ್ಠಿಯಲ್ಲಿ ಹಲವರು ಕವನ ವಾಚಿಸಿದರು.

ಆರನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ತಿರುಪತಿ ಹಳ್ಳಿ ಶಿವಶಂಕರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ
ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಓ.ಮಹಾಂತಪ್ಪ, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್‌, ಲೇಖಕ
ಗೊರೂರು ಅನಂತರಾಜು, ಆಲ್ಲೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್, ನಗರಸಭೆ ಸದಸ್ಯ
ಸಿ.ಆರ್.ಶಂಕರ್, ಹರಳಹಳ್ಳಿ ರಂಗಸ್ವಾಮಿ, ಚೈತ್ರಾ, ಸೋಮನಾಯಕ್, ರವಿ ನಾಲಗೂಡು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.