ADVERTISEMENT

ಶ್ರವಣಬೆಳಗೊಳ: ಮಸ್ತಕಾಭಿಷೇಕದಲ್ಲಿ ಮಿಂದೆದ್ದ ಚಿಕ್ಕ ಬಾಹುಬಲಿ

ಮೂರ್ತಿಯ ವಿವಿಧ ರೂಪಗಳನ್ನು ಕಣ್ತುಂಬಿಕೊಂಡ ಭಕ್ತರು: ಮುಗಿಲು ಮುಟ್ಟಿದ ಹರ್ಷೋದ್ಗಾರ

ಬಿ.ಪಿ.ಜಯಕುಮಾರ್‌
Published 17 ಫೆಬ್ರುವರಿ 2025, 5:54 IST
Last Updated 17 ಫೆಬ್ರುವರಿ 2025, 5:54 IST
ಶ್ರವಣಬೆಳಗೊಳದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯ ಪ್ರಾಂಗಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಚಿಕ್ಕ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕದಲ್ಲಿ ಕ್ಷೀರ, ಮೊಸರು, ಕಲ್ಕಚೂರ್ಣ, ಅರಿಷಿಣ, ರಕ್ತಚಂದನ, ಅಷ್ಟಗಂಧ, ಕೇಸರಿ, ಮಲಯಗಿರಿ ಚಂದನದ ಅಭಿಷೇಕ ನೆರವೇರಿತು.

ಶ್ರವಣಬೆಳಗೊಳ: ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಚಿಕ್ಕ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, 108 ರಜತ ಮತ್ತು 108 ಸುವರ್ಣ ಕಲಶಗಳಿಂದ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೆರವೇರಿತು. ಅಭಿಷೇಕ ನೆರವೇರುತ್ತಿದ್ದಂತೆಯೇ ಇತ್ತ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

‘ಬೆಳಗೊಳದ ಜಿನರಿಗೆ ಮಳೆ ಬಂದರಭಿಷೇಕ, ಗುಡುಗು ಮಿಂಚುಗಳೇ ಕೈತಾಳ, ಜಿನರಿಗೆ ಹೊಳೆವ ನಕ್ಷತ್ರಗಳೆ ಫಲ ಪುಂಜ’ ಇದು ಜನಪದರು ಬೆಳಗೊಳದ ಗೊಮ್ಮಟನಿಗೆ ನಿಸರ್ಗ ಮಾಡುವ ಅಭಿಷೇಕದ ವರ್ಣನೆಯನ್ನು ತಮ್ಮ ಜಾನಪದ ಶೈಲಿಯಲ್ಲಿ ಹೇಳಿದ್ದಾರೆ. ಅದರಂತೆ ಭಾನುವಾರ ಮಧ್ಯಾಹ್ನ ಸೌಂದರ್ಯದ ಖನಿಯಂತಿರುವ ಮಂದಸ್ಮಿತ ಚಿಕ್ಕ ಬಾಹುಬಲಿ ಮೂರ್ತಿಗೆ ನಡೆದ ಪ್ರಥಮ ಮಹಾಮಸ್ತಕಾಭಿಷೇಕವು ಕಣ್ಮನ ತುಂಬುವಂತಿದ್ದು, ಬಾಹುಬಲಿ ಮೂರ್ತಿ ವಿವಿಧ ಬಣ್ಣಗಳಿಂದ ಕಂಗೊಳಿಸಿತು.

ಪ್ರಥಮವಾಗಿ ಗುಳ್ಳುಕಾಯಜ್ಜಿಯ ಕಲಶ, ಚಾವುಂಡರಾಯ ಕಲಶಗಳಿಂದ ಜಲಾಭಿಷೇಕ ನಡೆಸಲು ಆಚಾರ್ಯರು ಚಾಲನೆ ನೀಡಿದರು. ನಂತರ ಕಾಶಿಯ ಗಂಗಾ ಜಲ, ಪ್ರಯಾಗರಾಜ್‌ನ ಸಂಗಮ ನದಿಗಳ ಜಲ, ಕೃಷ್ಣಾ, ಕಾವೇರಿ, ಗೋದಾವರಿ, ತುಂಗಾ, ಭದ್ರಾ ಮುಂತಾದ ನದಿಗಳಿಂದ ಸಂಗ್ರಹಿಸಿದ್ದ ಜಲದಿಂದ ಜಲಾಭಿಷೇಕಗಳು ನೆರವೇರಿದವು.

ADVERTISEMENT

ನಮ್ಮ ಆತ್ಮವೂ ಸಹ ಶುದ್ಧವಿರಲಿ ಎಂಬ ಭಾವನೆಯಿಂದ ನೈಸರ್ಗಿಕವಾಗಿ ಶುದ್ಧವಾಗಿರುವ ಎಳನೀರನ್ನು ಭಗವಂತನಿಗೆ ಅಭಿಷೇಕ ಮಾಡಲಾಯಿತು. ನಂತರ ಮೂರ್ತಿಗೆ ಕಬ್ಬಿನ ಹಾಲನ್ನು ಕೊಡಗಳಿಂದ ನೆತ್ತಿಯ ಮೇಲೆ ಹಾಕಿ ಅಭಿಷೇಕ ಮಾಡುವಾಗ ಭಗವಂತನು ಹಸಿರು ಬಣ್ಣಗಳಲ್ಲಿ ಕಂಗೊಳಿಸುತ್ತಿತ್ತು.

ಬಿಳಿಯ ಮುತ್ತಿನ ಮೂರ್ತಿಯಂತೆ ಕಾಣುತ್ತಿದ್ದುದು ಕ್ಷೀರಾಭಿಷೇಕ ಮಾಡುವ ಕ್ಷಣದಲ್ಲಿ. ಅಲೆಅಲೆಯಾಗಿ ಗೊಮ್ಮಟನ ಮೈಮೇಲೆ ಸಾಗುತ್ತ, ಭಗವಂತನ ಪಾದದ ಬಳಿ ಬರಲು ಪ್ರತಿಯೊಂದು ಅಲೆಗಳೂ ತಾಮುಂದು ತಾಮುಂದು ಎಂಬಂತೆ ಪೈಪೋಟಿ ನಡೆಸುತ್ತಿದ್ದವೇನೋ ಎನ್ನುವಂತೆ ಕಾಣಿಸುತ್ತಿತ್ತು. ನಂತರ ಮೊಸರಿನ ಅಭಿಷೇಕದ ಸರದಿ. ಈ ಅಭಿಷೇಕ ನಡೆಯುವಾಗಲಂತೂ ಮೂರ್ತಿಯು ಬೆಳ್ಳಿಯ ಮೂರ್ತಿಯಂತೆ ಕಾಣುತ್ತಿದ್ದು, ಭಕ್ತರು ಸುಂದರ ಕ್ಷಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಯಾವುದೇ ಅಭಿಷೇಕವನ್ನು ಹತ್ತಿರದಿಂದ ನೋಡಬೇಕು ಎನಿಸುತ್ತದೆ. ಆದರೆ ಶ್ವೇತ ಕಲ್ಕಚೂರ್ಣದ ಅಭಿಷೇಕ ಮಾತ್ರ ದೂರದಿಂದ ನೋಡಬೇಕು. ಅಭಿಷೇಕ ಮಾಡುವಾಗ ಹಿಮ ಪರ್ವತದ ನಡುವೆ ಎದ್ದು ಬಂದಂತೆ ಕಾಣಿಸುತ್ತಿದ್ದ ಬಾಹುಬಲಿ, ಅಭಿಷೇಕದ ನಂತರ ಯಾರೋ ಕಲೆಗಾರ ಪೆನ್ಸಿಲ್‌ನಿಂದ ಚಿತ್ರಿಸಿದ್ದಾರೇನೋ ಎಂಬಂತೆ ಕಾಣಿಸುತ್ತಿತ್ತು.

ಮೂರ್ತಿಯು ಚಿನ್ನದ ಪುತ್ಥಳಿಯಂತೆ ಕಾಣಿಸುತ್ತಿದ್ದುದು ಅರಿಶಿಣದ ಅಭಿಷೇಕದಲ್ಲಿ. ಸರ್ವ ರೋಗಗಳ ನಿವಾರಣೆಗಾಗಿ ಮತ್ತು ನಮ್ಮಲ್ಲಿರುವ ಕ್ರೋಧ, ಮಾನ, ಮಾಯಾ,ಲೋಭಗಳೆಂಬ ಕಷಾಯಗಳನ್ನು ದೂರ ಮಾಡಲು ಕಷಾಯ ಹಾಗೂ ಸರ್ವೌಷಧಿಯ ಅಭಿಷೇಕ ನೆರವೇರಿಸಲಾಗುತ್ತದೆ. ಈ ಕಷಾಯದಲ್ಲಿ ಜಾಯಿಕಾಯಿ, ಲವಂಗ, ಏಲಕ್ಕಿ, ಅರಳಿ ಮೊದಲಾದ ಔಷಧಿ ಸಸ್ಯಗಳನ್ನು ಕುದಿಸಿ, ಸೋಸಿ ಕಷಾಯ ತಯಾರಿಸಿ ಅಭಿಷೇಕದಲ್ಲಿ ಬಳಸುತ್ತಾರೆ.

ನಂತರ ಚತುಷ್ಕೋನ ಕಲಶಗಳಿಂದ ಅಭಿಷೇಕ  ಮಾಡಿದ ನಂತರ ರಕ್ತಚಂದನ, ಅಷ್ಟಗಂಧ, ಕೇಸರಿ, ಮಲಯಗಿರಿ ಚಂದನದಿಂದ ಅಭಿಷೇಕ ನೆರವೇರಿಸಲಾಯಿತು. ಕೇಸರಿಯಾ ಕೇಸರಿಯಾ ಬಾಹುಬಲಿ ಭಗವಾನ್ ಕೇಸರಿಯಾ ಎಂದು ಭಕ್ತರು ಸಂತೋಷದಿಂದ ನರ್ತಿಸುತ್ತಿದ್ದರು.

ಪಂಚರಂಗಿ ಹಾರ ಹಾಕಿ, ಅಷ್ಟವಿಧಾರ್ಚನೆ ನಡೆಸಿ, ತೇರಿನ ಆರತಿ, ಪಂಚಾರತಿ, ಕರ್ಪೂರದಾರತಿ, ಬೆಳ್ಳಿಯ ಆರತಿ, ಮುತ್ತು ರತ್ನ ಆರತಿಗಳನ್ನು ಬೆಳಗಲಾಯಿತು. ಲೋಕಶಾಂತಿಗಾಗಿ ಮಹಾ ಶಾಂತಿಧಾರದೊಂದಿಗೆ ಮಹಾಮಂಗಳಾರತಿ ಮಾಡಿ, ಭಕ್ತರಿಗೆ ಗಂಧೋದಕ ವಿತರಿಸಲಾಯಿತು.

ಶ್ರವಣಬೆಳಗೊಳದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯ ಪ್ರಾಂಗಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಚಿಕ್ಕ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕದಲ್ಲಿ ಕ್ಷೀರ ಮೊಸರು ಕಲ್ಕಚೂರ್ಣ ಅರಿಷಿಣ ರಕ್ತಚಂದನ ಅಷ್ಟಗಂಧ ಕೇಸರಿ ಮಲಯಗಿರಿ ಚಂದನದ ಅಭಿಷೇಕ ನೆರವೇರಿತು.

ದೀಕ್ಷಾ ಕಲ್ಯಾಣ

ಕೇವಲ ಜ್ಞಾನ ಕಲ್ಯಾಣ ಮಹಾಮಸ್ತಕಾಭಿಷೇಕಕ್ಕೂ ಮೊದಲು ಬೆಳಿಗ್ಗೆ ದೀಕ್ಷಾ ಕಲ್ಯಾಣ ಹಾಗೂ ಕೇವಲಜ್ಞಾನ ಕಲ್ಯಾಣದ ಧಾರ್ಮಿಕ ವಿಧಿಗಳು ಜರುಗಿದವು. ಮಸ್ತಕಾಭಿಷೇಕದಲ್ಲಿ ವಿವಿಧ ಮಂಗಲವಾದ್ಯ ಚೆಂಡೆವಾದ್ಯದ ಸೇವೆ ನಡೆಯಿತು. ಶ್ರೀಮಠದ ಪುರೋಹಿತ ವರ್ಗದವರು ಪೂಜೆಯ ನೇತೃತ್ವ ವಹಿಸಿದ್ದರು. ಸಾನಿಧ್ಯವನ್ನು ಆಚಾರ್ಯ ಕುಂಥುಸಾಗರ ಮಹಾರಾಜರು ಸಂಘಸ್ಥ ತ್ಯಾಗಿಗಳು ಮಾತಾಜಿಯವರು ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ ಸೋಂದಾಮಠದ ಭಟ್ಟಾಕಲಂಕ ಸ್ವಾಮೀಜಿ ನರಸಿಂಹರಾಜಪುರದ ಲಕ್ಷ್ಮೀಸೇನ ಸ್ವಾಮೀಜಿ ಕಂಬದಹಳ್ಳಿ ಜೈನಮಠದ ಬಾನುಕೀರ್ತಿ ಸ್ವಾಮೀಜಿ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿ ವಹಿಸಿದ್ದರು.

ಫಲ–ಪುಷ್ಪಗಳ ಅಭಿಷೇಕ

ವಿವಿಧ ಹಣ್ಣುಗಳಾದ ದಾಳಿಂಬೆ ಮೊಸಂಬಿ ಕಿತ್ತಳೆ ಮಾವಿನರಸ ತೆಂಗಿನತುರಿ ಕಡಲೇಬೇಳೆ ಹೆಸರುಬೇಳೆ ಸಕ್ಕರೆ ಬೆಲ್ಲ ತುಪ್ಪ ವಿವಿಧ ಹಣ್ಣುಗಳಿಂದ ಅಭಿಷೇಕ ನೆರವೇರಿಸಿದಾಗ ಮೂರ್ತಿಯು ಗುಲಾಬಿ ಕಿತ್ತಳೆ ತಿಳಿ ಹಳದಿ ಹಳದಿ ಬಣ್ಣಗಳಿಂದ ಕಂಗೊಳಿಸಿ ನೆರೆದಿದ್ದ ಭಕ್ತರನ್ನು ಪುನೀತರಾನ್ನಾಗಿಸಿತು. ನಂತರ ನವರತ್ನ ಬೆಳ್ಳಿ  ಬಂಗಾರದ ಹೂ ಲವಂಗ ಮುತ್ತು ಮೈಸೂರು– ಮಂಗಳೂರು ಮಲ್ಲಿಗೆ ಸಂಪಿಗೆ ಮರಲೆ ಸೇವಂತಿಗೆ ಗುಲಾಬಿ ಕಮಲ ಬಿಳಿ ತಾವರೆ ಪಾರಿಜಾತ ಕನಕಾಂಬರ ಕರವೀರ ಕಣಗಲೆಗಳು ಅಶೋಕಪುಷ್ಪಗಳಿಂದ ಪ್ರತ್ಯೇಕವಾಗಿ ಅಭಿಷೇಕ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.