ADVERTISEMENT

LS Polls | ಹಾಸನದಲ್ಲಿ ಸಡಿಲವಾಯಿತೇ ರೇವಣ್ಣ ಹಿಡಿತ

ಮೈತ್ರಿಕೂಟದ 6 ಶಾಸಕರಿದ್ದರೂ ಸೋಲು

ಚಿದಂಬರಪ್ರಸಾದ್
Published 5 ಜೂನ್ 2024, 7:15 IST
Last Updated 5 ಜೂನ್ 2024, 7:15 IST
<div class="paragraphs"><p>ಎಚ್.ಡಿ. ರೇವಣ್ಣ</p></div>

ಎಚ್.ಡಿ. ರೇವಣ್ಣ

   

ಹಾಸನ: ಎಚ್‌.ಡಿ. ದೇವೇಗೌಡರ ನಂತರ ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಸಾಧಿಸಿದ್ದು ಎಚ್.ಡಿ. ರೇವಣ್ಣ. ರೇವಣ್ಣ ಅವರ ಆಣತಿಯಿಂತೆಯೇ ಇದುವರೆಗೆ ಎಲ್ಲ ಚುನಾವಣೆ ನಡೆದಿದ್ದು, ಅದರಲ್ಲಿ ಗೆಲುವು ಸಾಧಿಸುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ, ಇದೀಗ ಹೊರಬಿದ್ದಿರುವ ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಜಿಲ್ಲೆಯಲ್ಲಿ ಎಚ್.ಡಿ. ರೇವಣ್ಣ ಅವರ ಹಿಡಿತ ಸಡಿಲವಾಗುತ್ತಿದೆಯೇ ಎನ್ನುವ ಚರ್ಚೆಗಳು ವ್ಯಾಪಕವಾಗಿವೆ.

2023ರ ವಿಧಾನಸಭೆ ಚುನಾವಣೆಯಲ್ಲಿಯೇ ಜಿಲ್ಲೆಯಲ್ಲಿ ಜೆಡಿಎಸ್‌ನ ಶಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ, ಆರರಲ್ಲಿ ಜೆಡಿಎಸ್‌ ಗೆದ್ದಿತ್ತು. ಆದರೆ, 2023 ರ ಚುನಾವಣೆಯಲ್ಲಿ ಆರು ಸ್ಥಾನಗಳಿಂದ ನಾಲ್ಕು ಸ್ಥಾನಗಳಿಗೆ ಕುಸಿದಿತ್ತು. ಹೊಳೆನರಸೀಪುರದಲ್ಲಿ ಸ್ವತಃ ಎಚ್‌.ಡಿ. ರೇವಣ್ಣ ಅವರೇ ಪ್ರಯಾಸದ ಗೆಲುವು ಪಡೆಯುವಂತಾಗಿತ್ತು.

ADVERTISEMENT

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ, ಅರಸೀಕೆರೆ ಶಾಸಕರಾಗಿದ್ದ ಕೆ.ಎಂ. ಶಿವಲಿಂಗೇಗೌಡರ, ಜೆಡಿಎಸ್‌ನಿಂದ ದೂರ ಸರಿದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಮಂಜು, ಜೆಡಿಎಸ್‌ ಪಾಳೆಯಕ್ಕೆ ಸೇರುವ ಮೂಲಕ ಅರಕಲಗೂಡು ಕ್ಷೇತ್ರ ಜೆಡಿಎಸ್‌ಗೆ ಉಳಿಯವಂತೆ ಮಾಡಿದ್ದರು.

ವಿಧಾನಸಭೆ ಚುನಾವಣೆಯಲ್ಲಿಯೇ ಜೆಡಿಎಸ್‌ನ ಶಕ್ತಿ ಕಡಿಮೆ ಆಗುತ್ತಿರುವ ಸಂದೇಶ ರವಾನೆಯಾಗಿತ್ತು. ಬೇಲೂರು, ಸಕಲೇಶಪುರ–ಆಲೂರು ಕ್ಷೇತ್ರಗಳನ್ನು ಜೆಡಿಎಸ್‌ ಕಳೆದುಕೊಂಡಿದ್ದಲ್ಲದೇ, ಉಳಿದ ಕ್ಷೇತ್ರಗಳಲ್ಲಿ ಮತಗಳಿಕೆಯ ಪ್ರಮಾಣವೂ ಕಡಿಮೆಯಾಗಿತ್ತು. ಜೆಡಿಎಸ್‌ನಿಂದ ಹೊರ ಹೋಗಿದ್ದ ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡರ ಕೊರತೆ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡು ಬಂತು.

ಕುಟುಂಬ ರಾಜಕಾರಣದಿಂದ ಹಿನ್ನಡೆ: ಪ್ರಮುಖವಾಗಿ ಎಚ್.ಡಿ. ರೇವಣ್ಣ ಅವರ ಹಿಡಿತ ಕೈತಪ್ಪಲು, ಕುಟುಂಬ ರಾಜಕಾರಣವೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪುತ್ರ ಸೂರಜ್‌ ಅವರಿಗೆ ಟಿಕೆಟ್‌ ಕೊಡಿಸಿದ್ದಲ್ಲದೇ ಗೆಲ್ಲಿಸಿಕೊಂಡು ಬಂದಿದ್ದ ಎಚ್‌.ಡಿ. ರೇವಣ್ಣ, 2019 ರ ಲೋಕಸಭೆ ಚುನಾವಣೆಯಲ್ಲಿ ಇನ್ನೊಬ್ಬ ಪುತ್ರ ಪ್ರಜ್ವಲ್‌ಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿದ್ದರು. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದರು. ಅಲ್ಲದೇ ಸ್ವತಃ ರೇವಣ್ಣ ಕೂಡ ಹೊಳೆನರಸೀಪುರ ಕ್ಷೇತ್ರದಿಂದ ಸತತವಾಗಿ ಶಾಸಕರಾಗಿದ್ದಾರೆ.

ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದೇ ಇದೀಗ ಎಚ್.ಡಿ. ರೇವಣ್ಣ ಅವರ ಪಾಲಿಗೆ ಮುಳುವಾಗಿದೆ. ಪ್ರಜ್ವಲ್‌ ಮೇಲಿನ ಅತಿಯಾದ ವಿಶ್ವಾಸ, ಕಾರ್ಯಕರ್ತರು, ಮುಖಂಡರ ಜೊತೆಗೆ ಸೌಜನ್ಯದಿಂದ ವರ್ತಿಸುವಂತೆ ಪ್ರಜ್ವಲ್‌ಗೆ ತಿಳಿ ಹೇಳದೇ ಇರುವುದೂ ಈ ಬಾರಿಯ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಸ್ವತಃ ಎಚ್.ಡಿ. ಕುಮಾರಸ್ವಾಮಿಯವರೇ ಹಾಸನಕ್ಕೆ ಬಂದು, ‘ಪ್ರಜ್ವಲ್‌ ತಪ್ಪು ಮಾಡಿದ್ದರೆ, ಕ್ಷಮಿಸಿ ಬಿಡಿ’ ಎಂದು ಕೇಳುವಷ್ಟರ ಮಟ್ಟಿಗೆ, ಪ್ರಜ್ವಲ್‌ ವರ್ತನೆಯಿಂದ ಜೆಡಿಎಸ್‌ ನಾಯಕರು ಬೇಸತ್ತಿದ್ದರು. ಅದರ ಫಲವಾಗಿಯೇ ಜೆಡಿಎಸ್ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೇ ಪ್ರಜ್ವಲ್‌ ರೇವಣ್ಣ ಕಡಿಮೆ ಮತಗಳನ್ನು ಪಡೆದಿದ್ದಾರೆ ಎನ್ನುವ ಚರ್ಚೆಗಳೂ ನಡೆಯುತ್ತಿವೆ.

ಒಂದೆಡೆ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಪತ್ನಿ ಹಾಗೂ ತಮ್ಮ ವಿರುದ್ಧ ಮಹಿಳೆ ಅಪಹರಣದ ಪ್ರಕರಣಗಳು ದಾಖಲಾಗಿದ್ದು, ಇದೀಗ ಪ್ರಜ್ವಲ್‌ ಸೋಲು, ರೇವಣ್ಣ ಅವರನ್ನು ಮತ್ತಷ್ಟು ಕಂಗೆಡಿಸಿದೆ ಎನ್ನುವ ಮಾತುಗಳು ಅವರ ಆಪ್ತರಿಂದ ಕೇಳಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.