ADVERTISEMENT

‌ಲೋಕಸಭೆ ಚುನಾವಣೆ: ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಯಾರು?

ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ರಾಜಕಾರಣ: ಜಿಲ್ಲೆಯಲ್ಲಿ ಸಂಚಲನ

ಚಿದಂಬರಪ್ರಸಾದ್
Published 9 ಸೆಪ್ಟೆಂಬರ್ 2023, 6:26 IST
Last Updated 9 ಸೆಪ್ಟೆಂಬರ್ 2023, 6:26 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಹಾಸನ: ಅತ್ತ ಎಚ್‌.ಡಿ. ದೇವೇಗೌಡರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸುತ್ತಿದ್ದಂತೆಯೇ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಅಂತಿಮವಾದಲ್ಲಿ, ಹಾಸನ ಕ್ಷೇತ್ರ ಅಭ್ಯರ್ಥಿ ಯಾರು ಎನ್ನುವ ಚರ್ಚೆಗಳು ಶುರುವಾಗಿವೆ.

ಮೈತ್ರಿ ಏರ್ಪಟ್ಟಲ್ಲಿ ಮೈಸೂರು ಭಾಗದ ಪ್ರಮುಖ ಕ್ಷೇತ್ರಗಳನ್ನು ಜೆಡಿಎಸ್‌ ತನಗೆ ಮೀಸಲಿರಿಸುವುದು ನಿಶ್ಚಿತವಾಗಿದ್ದು, ಹಾಸನ ಕ್ಷೇತ್ರವೂ ಸೇರುವುದು ಖಚಿತ. ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಇರಾದೆ ಪಕ್ಷಕ್ಕಿದ್ದು, ಎಚ್‌.ಡಿ. ದೇವೇಗೌಡರೇ ಮತ್ತೆ ಹಾಸನದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರ ಜೊತೆಗೆ ಎಚ್.ಡಿ. ದೇವೇಗೌಡರಿಗೆ ಉತ್ತಮ ಬಾಂಧವ್ಯವಿದೆ. ಮೈತ್ರಿ ಏರ್ಪಟ್ಟಲ್ಲಿ, ದೇವೇಗೌಡರೇ ಸ್ಪರ್ಧಿಸುವುದು ಸೂಕ್ತ. ಈ ಬಗ್ಗೆ ಬಿಜೆಪಿ ವರಿಷ್ಠರೇ, ಸ್ಥಳೀಯ ನಾಯಕರಿಗೆ ಮನವರಿಕೆ ಕೂಡ ಮಾಡಲಿದ್ದಾರೆ. ಇದರಿಂದ ಸ್ಥಳೀಯವಾಗಿ ಬಿಜೆಪಿ ಬೆಂಬಲ ಪಡೆಯುವುದು ಸುಲಭವಾಗಲಿದೆ’ ಎಂಬ ಲೆಕ್ಕಾಚಾರ ಜೆಡಿಎಸ್‌ ಮುಖಂಡರದ್ದು.

ADVERTISEMENT

ಇನ್ನೊಂದೆಡೆ, ಸಂಸದ ಸ್ಥಾನದಿಂದ ಅಸಿಂಧುಗೊಂಡ ಪ್ರಜ್ವಲ್ ರೇವಣ್ಣ ಪ್ರಕರಣ ಲೋಕಸಭೆ ಚುನಾವಣೆಯ ಹೊತ್ತಿಗೆ ಯಾವ ಹಂತದಲ್ಲಿ ಇರಲಿದೆ? ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಜಯ ಸಿಗದಿದ್ದರೆ 6 ವರ್ಷ ಸ್ಪರ್ಧಿಸದೇ ಇರುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ. ಆಗ ಪಕ್ಷದ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕೆಂಬ ಪ್ರಶ್ನೆಯೂ ಮೂಡಲಿದೆ. ಹೀಗಾಗಿ, ‘ದೇವೇಗೌಡರೇ ತವರು ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ’ ಎನ್ನಲಾಗುತ್ತಿದೆ.

ಕಳೆದ ಬಾರಿ ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ದೇವೇಗೌಡರು, ತುಮಕೂರಿನಿಂದ ಸ್ಪರ್ಧಿಸಿ, ಸೋತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರೇ ಹಾಸನದಿಂದ ಸ್ಪರ್ಧಿಸಿದರೆ ಅನುಕೂಲವೆಂಬ ಮಾತುಗಳ ಕೇಳಿಬರುತ್ತಿವೆ.

ದೇವೇಗೌಡರು ಕುಟುಂಬ ಸಮೇತರಾಗಿ ಕೆಲ ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹರದನಹಳ್ಳಿ, ಹೊಳೆನರಸೀಪುರ, ಹಾಸನದ ಮುಖಂಡರೊಂದಿಗೂ ಚರ್ಚಿಸಿದ್ದಾರೆ. ‌ಆ ಮೂಲಕ ಮತ್ತೊಮ್ಮೆ ಹಾಸನದಿಂದ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಒಬ್ಬ ಶಾಸಕರಿದ್ದಾರೆ. ಜೆಡಿಎಸ್‌ನ ನಾಲ್ವರು ಶಾಸಕರಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಇಬ್ಬರು ಶಾಸಕರುಳ್ಳ ಬಿಜೆಪಿ ಸ್ಥಿತಿಯೂ ಭಿನ್ನವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸಬಹುದು’ ಎಂಬ ಲೆಕ್ಕಾಚಾರವೂ ನಡೆದಿದೆ.

‌ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವನ್ನೂ ದೊಡ್ಡವರು ನೋಡಿಕೊಳ್ಳುತ್ತಾರೆ.
ಎಚ್.ಡಿ. ರೇವಣ್ಣ ಜೆಡಿಎಸ್‌ ಶಾಸಕ

ಬಿಜೆಪಿ ಮುಖಂಡರ ಅಪಸ್ವರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಿರುವ ಬಿಜೆಪಿ ಇದೀಗ ಅದೇ ಪಕ್ಷದ ಜೊತೆಗೆ ಕೈಜೋಡಿಸುತ್ತಿರುವುದು ಸ್ಥಳೀಯ ನಾಯಕರಿಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಈಗಾಗಲೇ ಬಿಜೆಪಿಯ ಹಲವು ನಾಯಕರು ಜೆಡಿಎಸ್‌ ಜೊತೆಗಿನ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ಎ.ಟಿ. ರಾಮಸ್ವಾಮಿಯವರು ‘ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲ’ ಎನ್ನುವ ಅಭಿಪ್ರಾಯವನ್ನು ಈಗಾಗಲೇ ತಿಳಿಸಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಪ್ರೀತಂ ಗೌಡ ಕೂಡ ‘ಜೆಡಿಎಸ್‌ ಜೊತೆಗೆ ಮೈತ್ರಿ ಏರ್ಪಟ್ಟರೂ ಹಾಸನ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು ಬಿಜೆಪಿಗೆ ಬಿಟ್ಟು ಕೊಡಬೇಕು’ ಎನ್ನುವ ಬೇಡಿಕೆ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದ ಎ.ಟಿ. ರಾಮಸ್ವಾಮಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಮೈತ್ರಿ ಏರ್ಪಟ್ಟಲ್ಲಿ ರಾಮಸ್ವಾಮಿ ಅವರ ನಡೆ ಏನು ಎನ್ನುವ ಕುತೂಹಲವೂ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.