ADVERTISEMENT

ಬೇಲೂರು: ಲಿಂಗಪುರ ಜಾತ್ರೆಗೆ ಬಂದ ಒಂಟಿ ಸಲಗ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:15 IST
Last Updated 9 ಮೇ 2025, 14:15 IST
ಬೇಲೂರು ತಾಲ್ಲೂಕಿನ ಲಿಂಗಪುರ ಗ್ರಾಮದಲ್ಲಿ ಗುರುವಾರ ಕಾಡಾನೆಯೊಂದು ಕಾಣಿಸಿಕೊಂಡಿತ್ತು.
ಬೇಲೂರು ತಾಲ್ಲೂಕಿನ ಲಿಂಗಪುರ ಗ್ರಾಮದಲ್ಲಿ ಗುರುವಾರ ಕಾಡಾನೆಯೊಂದು ಕಾಣಿಸಿಕೊಂಡಿತ್ತು.   

ಬೇಲೂರು: ಗುಂಪಿನಿಂದ ತಪ್ಪಿಸಿಕೊಂಡ ಕಾಡಾನೆಯೊಂದು ಏಕಾಏಕಿ ತಾಲ್ಲೂಕಿನ ಲಿಂಗಪುರ ಗ್ರಾಮದಲ್ಲಿ ದೇವಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ನುಗ್ಗಿದ್ದು, ಸ್ಥಳದಲ್ಲಿದ್ದ ಹಲವು ವಾಹನಗಳನ್ನು ಜಖಂಗೊಳಿಸಿದೆ.

ತಾಲ್ಲೂಕಿನ ಅರೇಹಳ್ಳಿ ಹೋಬಳಿ ಲಿಂಗಪುರ ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪಿತ ಚಾಮುಂಡೇಶ್ವರಿ ದೇವಿ ಉತ್ಸವ ಗುರುವಾರ ನಡೆಯುತ್ತಿತ್ತು. ರಾತ್ರಿ 9 ಗಂಟೆಯ ಸಮಯದಲ್ಲಿ ಏಕಾಏಕಿ ಕಾಡಾನೆ ನುಗ್ಗಿದ್ದರಿಂದ, ದೇವಾಲಯದಲ್ಲಿ ನೆರೆದಿದ್ದ ನೂರಾರು ಭಕ್ತರು ಭಯಭೀತರಾಗಿ ಓಡಿದರು.

ಜನರ ಕಿರಿಚಾಟಕ್ಕೆ ರೊಚ್ಚಿಗೆದ್ದ ಕಾಡಾನೆ, ದೇವಸ್ಥಾನದ ಸುತ್ತಲೂ ನಿಲ್ಲಿಸಿದ್ದ ಬೈಕ್ ಮತ್ತು ಕಾರುಗಳ ಮೇಲೆ ದಾಳಿ ನಡೆಸಿ ಜಖಂಗೊಳಿಸಿತು. ಆದರೆ ಯಾವುದೇ ಭಕ್ತರಿಗೆ ಹಾನಿಯಾಗಿಲ್ಲ. ತಕ್ಷಣ ಎಚ್ಚೆತ್ತ ದೇವಾಲದ ಆಡಳಿತ ಮಂಡಳಿ ಆನೆ ಓಡಿಸಲು ಪಟಾಕಿ ಸಿಡಿಸಿದರು.

ADVERTISEMENT

ವಿಷಯ ತಿಳಿದ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಆನೆಯನ್ನು ಕಾಡಿಗೆ ಓಡಿಸಲು ಯಶಸ್ವಿಯಾದರು.

ಬೇಲೂರು ತಾಲ್ಲೂಕಿನಲ್ಲಿ ಭುವನೇಶ್ವರಿ ಗುಂಪಿನ ಹತ್ತಕ್ಕೂ ಹೆಚ್ಚು ಕಾಡಾನೆಗಳು ಸಂಚರಿಸುತ್ತಿದ್ದು, ಗುಂಪಿನಿಂದ ತಪ್ಪಿಸಿಕೊಂಡ ಕಾಡಾನೆಯೊಂದು ಗಾಬರಿಗೊಂಡು ಕಾರ್ಯಕ್ರಮಕ್ಕೆ ನುಗ್ಗಿತ್ತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಾಹನಗಳ ಮೇಲೆ ದಾಳಿ ನಡೆಸಿದ್ದು, ಸಣ್ಣಪುಟ್ಟ ಜಖಂ ಆಗಿದೆ. ಹೆಚ್ಚಿನ ನಿಗಾ ವಹಿಸಿ ಅರ‌ಣ್ಯ ಇಲಾಖೆ ಸಿಬ್ಬಂದಿ ಗುಂಪಿನಿಂದ ಬೇರ್ಪಟ್ಟಿದ್ದ ಕಾಡಾನೆಯನ್ನು ಸಕಲೇಶಪುರ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ಯತೀಶ್ ಬಿ.ಜಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.