ADVERTISEMENT

ಲೋಕಸಭಾ ಚುನಾವಣೆ: ಮಾದರಿ ನೀತಿ ಸಂಹಿತೆ ಪಾಠ

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಸಭೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:07 IST
Last Updated 12 ಮಾರ್ಚ್ 2019, 14:07 IST
ಹಾಸನದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು.
ಹಾಸನದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು.   

ಹಾಸನ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಪ್ರತಿನಿಧಿಗಳ ಜತೆ ಸಭೆ ನಡೆಸಿದ ಅವರು, ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದ ವೇಳೆ ಅನುಸರಿಸಬೇಕಾದ ವಿಷಯಗಳು, ಪ್ರಚಾರ ಸಾಮಾಗ್ರಿಗಳ ಮುದ್ರಣ ಮಾಡುವ ಮುನ್ನ ಹಾಗೂ ಸಭೆ, ಸಮಾರಂಭಗಳ ದಿನಾಂಕ ಸಮಯದ ಬಗ್ಗೆ ಅನುಮತಿ ಪಡೆಯುವ ಕುರಿತು ಮಾಹಿತಿ ನೀಡಲಾಯಿತು.

ಜಿಲ್ಲಾಧಿಕಾರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು, 9 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 2235 ಮತಗಟ್ಟೆಗಳಿದ್ದು, 16,29,000 ಮತದಾರರಿದ್ದಾರೆ. ಹೊಸದಾಗಿ ನೋಂದಾಯಿಸಿಕೊಳ್ಳುವ ಮತದಾರರು ಇದಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಾಷ ತಿಳಿಸಿದರು.

ADVERTISEMENT

ರಾಜಕೀಯ ಪಕ್ಷಗಳು ಜಿಲ್ಲಾ ಚುನಾವಣಾಧಿಕಾರಿ ನೀಡುವ ಅಂತಿಮ ಮತದಾರರ ಪಟ್ಟಿ ಇರಿಸಿಕೊಳ್ಳುವುದರಿಂದ ಅನಗತ್ಯ ಗೊಂದಲ ತಪ್ಪುತ್ತದೆ. ಮತದಾರರು ಚುನಾವಣಾ ಆಯೋಗ ವಿತರಿಸಿರುವ ಭಾವಚಿತ್ರ ಇರುವ ಗುರುತಿನ ಚೀಟಿಯನ್ನೇ ಬಳಸುವುದು ಉತ್ತಮ ಎಂದು ಹೇಳಿದರು.

ಎಲ್ಲಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಅರಿತು ಪಾಲನೆ ಮಾಡಬೇಕು. ಯಾವುದಾದರೂ ಗೊಂದಲ ಅಥವಾ ಅನುಮಾನಗಳಿದ್ದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಬಹುದು ಅಥವಾ ಚುನಾವಣಾ ಆಯೋಗ ಅಥವಾ ಸ್ಥಳೀಯ ಚುನಾವಣಾ ವಿಭಾಗದ ವೆಬ್‍ಸೈಟ್ ನಿಂದಲೂ ಮಾಹಿತಿಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ವಾಹನ ಬಳಕೆ ಹಾಗೂ ಹೆಲಿಕಾಪ್ಟರ್ ಇಳಿಸಲು ಅನುಮತಿಗೆ ಸುವಿಧ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಚುನಾವಣಾ ದೂರುಗಳ ಬಗ್ಗೆ ನಿಗಾವಹಿಸಲು ಸಿ-ವಿಜಿಲ್‌ ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಎನ್.ವಿಜಯ್ ಪ್ರಕಾಶ್, ಹಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಚುನಾವಣಾ ತಹಶೀಲ್ದಾರ್ ನಾಗಭೂಷಣ್ ಹಾಗೂ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ದೇವೇಗೌಡ, ವೇಣುಕುಮಾರ್, ನಾರಾಯಣಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.