ADVERTISEMENT

ಆರಂಭದಲ್ಲೇ ಬಿಳಿಸುಳಿ ರೋಗದ ಆತಂಕ; ಮೆಕ್ಕೆಜೋಳ ಬೆಳೆದ ರೈತರಿಗೆ ನಷ್ಟದ ಸಂಕಷ್ಟ

ಚಿದಂಬರಪ್ರಸಾದ್
Published 14 ಜೂನ್ 2025, 5:37 IST
Last Updated 14 ಜೂನ್ 2025, 5:37 IST
ಹಾಸನದ ತಾಲ್ಲೂಕಿನ ಕಟ್ಟಾಯ ಹೋಬಳಿ ಚನ್ನಂಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಲಕ್ಕನಾಯಕನಹಳ್ಳಿ ಗ್ರಾಮದಲ್ಲಿ ಜೋಳಕ್ಕೆ ರೋಗ ತಗುಲಿರುವುದನ್ನು ಶಾಸಕ ಸಿಮೆಂಟ್‌ ವೀಕ್ಷಿಸಿದರು.
ಹಾಸನದ ತಾಲ್ಲೂಕಿನ ಕಟ್ಟಾಯ ಹೋಬಳಿ ಚನ್ನಂಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಲಕ್ಕನಾಯಕನಹಳ್ಳಿ ಗ್ರಾಮದಲ್ಲಿ ಜೋಳಕ್ಕೆ ರೋಗ ತಗುಲಿರುವುದನ್ನು ಶಾಸಕ ಸಿಮೆಂಟ್‌ ವೀಕ್ಷಿಸಿದರು.   

ಹಾಸನ: ಮುಂಗಾರು ಮಳೆ ನಿಗದಿಗಿಂತ ಮೊದಲೇ ಆರಂಭವಾಗಿದ್ದು, ಇದೀಗ ಮೆಕ್ಕೆಜೋಳದ ಬಿತ್ತನೆ ಮಾಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆರಂಭದಲ್ಲಿಯೇ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಆವರಿಸುತ್ತಿದ್ದು, ಇಳುವರಿ ಕುಂಠಿತವಾಗುವ ಸಾಧ್ಯತೆಗಳಿವೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು 1.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ರಾಗಿ 85 ಸಾವಿರ ಹೆಕ್ಟೇರ್‌, ಭತ್ತವನ್ನು 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈಗಾಗಲೇ 34 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳದ ಬಿತ್ತನೆ ಕಾರ್ಯ ನಡೆದಿದೆ.

ಜಿಲ್ಲೆಗೆ ಅಂದಾಜು 10 ಸಾವಿರ ಕ್ವಿಂಟಲ್‌ ಮುಸುಕಿನ ಜೋಳದ ಬಿತ್ತನೆ ಬೀಜದ ಅಗತ್ಯವಿದ್ದು,. ಇದರಲ್ಲಿ ಶೇ 95 ರಷ್ಟು ಖಾಸಗಿ ಸಂಸ್ಥೆಗಳಿಂದಲೇ ಮಾರಾಟ ಮಾಡಲಾಗುತ್ತಿದೆ. ಕೃಷಿ ಇಲಾಖೆಯಿಂದ ಕೇವಲ ಶೇ 5ರಷ್ಟು ಮಾತ್ರ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಈವರೆಗೂ 34 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 8 ಸಾವಿರ ಹೆಕ್ಟೇರ್‌ಗಳು ಅಧಿಕ ಪ್ರದೇಶದಲ್ಲಿ ಬಿಳಿ ಸುಳಿ ರೋಗ ಕಾಣಿಸಿಕೊಂಡಿದೆ. ಹಾಸನ ತಾಲ್ಲೂಕಿನ 6 ಸಾವಿರ ಹೆಕ್ಟೇರ್‌, ಹೊಳೆನರಸೀಪುರ ತಾಲ್ಲೂಕಿನಲ್ಲಿ 1 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ.

ನಷ್ಟದ ಆತಂಕ: ಬಹುತೇಕ ರೈತರು ಖಾಸಗಿ ಅಂಗಡಿಗಳಿಂದ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. 3.5 ಕೆ.ಜಿ. ಚೀಲಕ್ಕೆ ₹1650 ಬೆಲೆ ಇದೆ. ಒಂದು ಎಕರೆ ಜಮೀನಿಗೆ 6 ಕೆ.ಜಿ. ಬಿತ್ತನೆ ಬೀಜ ಅವಶ್ಯಕ. ಉಳುಮೆ, ಗೊಬ್ಬರ ಸೇರಿದಂತೆ ಸುಮಾರು ₹20 ಸಾವಿರದಿಂದ ₹25 ಸಾವಿರ ಖರ್ಚು ಬರುತ್ತದೆ.

ಆದರೆ, ಬಿತ್ತನೆ ಮಾಡಿದ ಸುಮಾರು 25 ದಿನದ ನಂತರ ಗಿಡಗಳು ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಅಲ್ಲದೇ ಗಿಡಗಳು ನಿಲ್ಲಲಾರದೇ ಮುದುಡುತ್ತಿವೆ. ಮುಂದಿನ ದಿನಗಳಲ್ಲಿ ಗಿಡಗಳು ಬಲಿಯಲು ಅವಕಾಶ ಇಲ್ಲದಂತಾಗಿದ್ದು, ಗಿಡಗಳು ಬಲಿಯದೇ ತೆನೆ ಬಿಡದಿದ್ದರೆ ನಷ್ಟ ಅನುಭವಿಸುವಂತಾಗಲಿದೆ ಎಂದು ರೈತರು ಹೇಳುತ್ತಿದ್ದಾರೆ.ಹತೋಟಿ ಕ್ರಮಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಮಾಹಿತಿ ನೀಡಬೇಕು. ಅಗತ್ಯ ಔಷಧಿ ಪೂರೈಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಶ್ರೇಯಸ್ ಪಟೇಲ್‌ ಸಂಸದ

‘ಖಾಸಗಿ ಕಂಪನಿ ಬೀಜದಿಂದ ಸಂಕಷ್ಟ’

ಖಾಸಗಿ ಕಂಪನಿಗಳಿಂದ ಖರೀದಿಸಿದ ಬೀಜಗಳಿಂದಲೇ ರೋಗ ಉಲ್ಬಣವಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಬಿಳಿಸುಳಿ ರೋಗ ಆರಂಭದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಬೆಳೆಯನ್ನು ತೆಗೆದು, ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಬಿತ್ತನೆ ಮಾಡಿರುವ ಶೇ 95ರಷ್ಟು ಬೀಜಗಳನ್ನು ಖಾಸಗಿ ಕಂಪನಿಗಳಿಂದಲೇ ಖರೀದಿಸಲಾಗಿದೆ. ಶೇ 5ರಷ್ಟು ಮಾತ್ರ ಕೃಷಿ ಇಲಾಖೆಯಿಂದ ವಿತರಿಸಲಾಗಿದೆ. ಹೀಗಾಗಿ ಖಾಸಗಿ ಕಂಪನಿಗಳ ಬೀಜಗಳಲ್ಲಿಯೇ ಲೋಪವಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈ ಕುರಿತು ಈಗಾಗಲೇ ಮಾದರಿಗಳನ್ನು ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಖಾಸಗಿ ಕಂಪನಿಗಳ ಬೀಜದಲ್ಲಿ ನ್ಯೂನತೆ ಇದ್ದರೆ, ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್‌ ತಿಳಿಸಿದ್ದಾರೆ.

ಮೆಕ್ಕೆಜೋಳಕ್ಕೆ ಆಸಕ್ತಿ:

ಐದಾರು ವರ್ಷಗಳ ಹಿಂದೆ ಮೆಕ್ಕೆಜೋಳ ಬೆಳೆಯಲು ರೈತರು ಆಸಕ್ತಿ ತೋರುತ್ತಿರಲಿಲ್ಲ. ಆದರೆ, ಕರ್ನಾಟಕ ಹಾಲು ಮಹಾಮಂಡಳಿದ ವತಿಯಿಂದ ಮೆಕ್ಕೆಜೋಳ ಖರೀದಿ ಆರಂಭಿಸಿದ್ದು, ಇದೀಗ ಬಹುತೇಕ ರೈತರು ಮೆಕ್ಕೆಜೋಳ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ.

ಕೆಎಂಎಫ್‌ನಿಂದ ಪ್ರತಿ ಕ್ವಿಂಟಲ್‌ಗೆ ₹2,400ರಿಂದ ₹2,500 ದರದಲ್ಲಿ ಖರೀದಿಸಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯ ರಾಗಿರುವ ಬಹುತೇಕ ರೈತರು, ಮೆಕ್ಕೆ ಜೋಳ ಬೆಳೆದು, ಹಾಲು ಮಹಾ ಮಂಡಳಕ್ಕೆ ಮಾರಾಟ ಮಾಡುತ್ತಿದ್ದಾರೆ.

ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬಿಳಿಸುಳಿ ರೋಗ ಕಾಣಿಸಿಕೊಂಡಿದ್ದು ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. 143 ಗ್ರಾಮಗಳಲ್ಲಿ ರೈತರೊಂದಿಗೆ ಸಭೆ ನಡೆಸಲಾಗಿದೆ
ರಮೇಶ್‌ಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಮೆಕ್ಕೆಜೋಳಕ್ಕೆ ರೋಗ ತಗಲುತ್ತಿದ್ದು ಇದರಿಂದ ಇಳುವರಿ ಕುಂಠಿತ ಆಗಲಿದೆ. ಉನ್ನತ ಅಧಿಕಾರಿಗಳನ್ನು ಕಳುಹಿಸಿ ರೋಗಬಾಧೆಯ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು.
ಎಚ್.ಡಿ.ರೇವಣ್ಣ, ಶಾಸಕ
ಹತೋಟಿ ಕ್ರಮಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಮಾಹಿತಿ ನೀಡಬೇಕು. ಅಗತ್ಯ ಔಷಧಿ ಪೂರೈಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ.
ಶ್ರೇಯಸ್ ಪಟೇಲ್‌, ಸಂಸದ
ಜೋಳ ಬೆಳೆಗೆ ತಗಲುತ್ತಿರುವ ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಜೊತೆಗೆ ಸೂಕ್ತ ಔಷಧಿ ಸಿಂಪಡಣೆ ಹಾಗೂ ಮಣ್ಣು ಪರೀಕ್ಷೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸ್ವರೂಪ್‌ ಪ್ರಕಾಶ್‌, ಶಾಸಕ
ಹಾಸನದ ತಾಲ್ಲೂಕಿನ ಕಟ್ಟಾಯ ಹೋಬಳಿ ಚನ್ನಂಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಲಕ್ಕನಾಯಕನಹಳ್ಳಿ ಗ್ರಾಮದಲ್ಲಿ ಜೋಳಕ್ಕೆ ರೋಗ ತಗುಲಿರುವುದನ್ನು ಶಾಸಕ ಸಿಮೆಂಟ್‌ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.