ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಒತ್ತಾಯ

ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದ ರೈತರ ಪ್ರತಿಭಟನೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 3:19 IST
Last Updated 26 ನವೆಂಬರ್ 2025, 3:19 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು   

ಹಾಸನ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಹಾಗೂ ಕೆಎಂಎಫ್ ಮೂಲಕ ಜೋಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.

ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದ ನಡುವೆ ತತ್ತರಿಸುತ್ತಿರುವ ರೈತರಿಗೆ ಕಳಪೆ ಮೆಕ್ಕೆಜೋಳ ಬೀಜ ವಿತರಿಸಿದ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಎರಡು ಬಾರಿ ಬಿತ್ತನೆ ಮಾಡಿದರೂ ಬಂಡವಾಳವೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿಕ್ಕುತೋಚದ ರೈತರು ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ರೈತರು ಆರೋಪಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷೀಯ ಮಂಡಳಿ ಸದಸ್ಯ ಗ್ಯಾರಂಟಿ ರಾಮಣ್ಣ ಮಾತನಾಡಿ, ‘ರೈತರಿಗೆ ಆತ್ಮಸ್ಥೈರ್ಯ ತುಂಬಿ ರಕ್ಷಣೆ ನೀಡಬೇಕಾದ ಕರ್ತವ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದಾಗಿದೆ. ಆದರೆ ಈ ಸರ್ಕಾರಗಳು ರೈತರ ಸಮಾಧಿಗಳ ಮೇಲೆ ಮಹಲು ಕಟ್ಟುವಂತೆ ವರ್ತಿಸುತ್ತಿವೆ’ ಎಂದು ಆರೋಪಿಸಿದರು.

ADVERTISEMENT

ಬಿತ್ತನೆ ಬೀಜ, ರಸಗೊಬ್ಬರ, ರಾಸಾಯನಿಕಗಳು ದುಬಾರಿಯಾಗಿವೆ. ಈ ರೀತಿಯ ಬೆಲೆ ಏರಿಕೆಯಿಂದ ಬೆಳೆ ಬೆಳೆಯಲು ರೈತರು ಭಾರೀ ವೆಚ್ಚ ಮಾಡಬೇಕಾಗಿದೆ. ಆದರೆ, ಬೆಳೆದ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕೂ ಕಡಿಮೆಯಲ್ಲಿ ಮಾರಾಟ ಆಗುತ್ತಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕಿದ್ದರೂ ಇನ್ನೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯು ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪಶು ಆಹಾರಕ್ಕೆ ಅಗತ್ಯವಾಗಿರುವ ಮೆಕ್ಕೆಜೋಳವನ್ನು ಕೆಎಂಎಫ್ ಹೊರರಾಜ್ಯಗಳಿಂದ ದಲ್ಲಾಳಿಗಳ ಮೂಲಕ ಖರೀದಿ ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯ ರೈತರಿಂದಲೇ ಮೆಕ್ಕೆಜೋಳ ಖರೀದಿ ಮಾಡುವ ಬದಲಿಗೆ ಹೊರ ಜಿಲ್ಲೆ–ಹೊರರಾಜ್ಯಗಳ ಅವಲಂಬನೆ ಮುಂದುವರಿದಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಸ್ಥಳೀಯ ರೈತರಿಗೆ ಆದ್ಯತೆ ನೀಡಿ ಖರೀದಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಕಣಗಾಲ್ ಮೂರ್ತಿ, ರೈತ ಸಂಘದ ಹೋರಾಟಗಾರ ಬಳ್ಳೂರು ಉಮೇಶ್, ಬಿಟ್ಟಗೌಡ ನಹಳ್ಳಿ ಮಂಜು, ಮರ್ಕುಲಿ ಪ್ರಕಾಶ್, ಭುವನೇಶ್, ಜಗದೀಶ್, ಶಿವಕುಮಾರ್, ಸೇರಿದಂತೆ ರೈತರು ಭಾಗವಹಿಸಿದ್ದರು.

ಮೆಕ್ಕೆಜೋಳ ಕಳಪೆ ಬೀಜ ಪೂರೈಕೆಯಿಂದ ಉಂಟಾಗಿರುವ ನಷ್ಟವನ್ನು ಸರ್ಕಾರವೇ ಭರಿಸಬೇಕು. ಬೇಡಿಕೆ ಈಡೇರಿಸುವಂತೆ ನಡೆಯುತ್ತಿರುವ ಹಗಲು–ರಾತ್ರಿ ಧರಣಿ ಮುಂದುವರಿಯಲಿದೆ

ಗ್ಯಾರಂಟಿ ರಾಮಣ್ಣ, ಸದಸ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷೀಯ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.