ADVERTISEMENT

ಮಲೆನಾಡು ಭಾಗದಲ್ಲಿ ಬೆಳೆಯುವ ಕಾಫಿ ಉತ್ಕೃಷ್ಟ

ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಚಿತ್ರನಟ ದೊಡ್ಡಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:25 IST
Last Updated 3 ಅಕ್ಟೋಬರ್ 2025, 3:25 IST
ಸಕಲೇಶಪುರದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರನ್ನು ಸನ್ಮಾನಿಸಲಾಯಿತು
ಸಕಲೇಶಪುರದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರನ್ನು ಸನ್ಮಾನಿಸಲಾಯಿತು   

ಸಕಲೇಶಪುರ: ಕರ್ನಾಟಕದ ಮಲೆನಾಡು ಭಾಗದಲ್ಲಿ ಬೆಳೆಯುವ ಉತ್ಕೃಷ್ಟ, ಗುಣಮಟ್ಟ ಹಾಗೂ ರುಚಿಯಾದ ಕಾಫಿ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸಮೀಪ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಗೂ ಕರ್ನಾಟಕ ಗ್ರೋಯರ್ಸ್ ಫೆಡರೇಷನ್ ವತಿಯಿಂದ ಬುಧವಾರ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಭಾರತದ ಕಾಫಿ ಅದರಲ್ಲೂ ಕರ್ನಾಟದ ಹಾಸನ, ಕೊಡಗು, ಚಿಕ್ಕಮಗಳೂರು ಪಶ್ಚಿಮಘಟ್ಟದ ಹಸಿರು ಸೆರಗಿನ ಅಡಿಯಲ್ಲಿ ಬೆಳೆಯುವ ಕಾಫಿಗೆ ಜಗತ್ತಿನಲ್ಲಿ ಭಾರೀ ಬೇಡಿಕೆ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ಕಾಫಿಯನ್ನು ಗುರುತಿಸುವ ಕೆಲಸ ಸಂಘಟನೆಗಳಿಂದ ಆಗಬೇಕು’ ಎಂದರು.

ADVERTISEMENT

ಶಾಸಿಕ ಸಿಮೆಂಟ್ ಮಂಜು ಮಾತನಾಡಿ, ‘ಕಾಫಿ ಬೆಳೆಗಾರರು ಒಳ್ಳೆಯ ಬಟ್ಟೆ ಹಾಕಿ ಕಾರಿನಲ್ಲಿ ಓಡಾಡುವುದನ್ನು ನೋಡಿ ಇವರೆಲ್ಲಾ ಶ್ರೀಮಂತರು ಎಂದು ಹೇಳುವವರೇ ಹೆಚ್ಚು. ಬ್ರಿಟಿಷರ ಕಾಲದಿಂದಲೂ ಮಲೆನಾಡಿನ ಜನ ಉಪವಾಸ ಇದ್ದರೂ ಒಳ್ಳೆಯ ಬಟ್ಟೆ ಹಾಗೂ ಶಿಸ್ತುಬದ್ಧವಾಗಿ ಇರುತ್ತಾರೆ. ಆದರೆ ಇಲ್ಲಿ ಬೆಟ್ಟದಷ್ಟು ಸಮಸ್ಯೆ ಇದೆ. ಅತಿವೃಷ್ಟಿ, ರೋಗಬಾಧೆ, ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ, ಮೂಲ ಸೌಲಭ್ಯಗಳ ಕೊರತೆ, ಬ್ಯಾಂಕ್‌ ಸಾಲ ಏರಿಕೆ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಮೂರು ವರ್ಷಗಳಿಂದಲೂ ಅತಿವೃಷ್ಟಿಯಿಂದ ಬೆಳೆಹಾನಿ ಆಗುತ್ತಿದ್ದರೂ ಸರ್ಕಾರ ನಷ್ಟಕ್ಕೆ ಒಳಗಾದ ರೈತರು, ಬೆಳೆಗಾರರಿಗೆ ಪರಿಹಾರವನ್ನೇ ನೀಡಿಲ್ಲ. ಕಾಫಿ ಬೆಳೆಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವ ಬೇಡಿಕೆ ನನೆಗುದಿಗೆ ಬಿದ್ದಿದೆ’ ಎಂದರು.

ರಾಜ್ಯ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಯನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುವ ನಿಟ್ಟಿನಲ್ಲಿ ಎಲ್ಲಾ ಬೆಳೆಗಾರರು ಸಂಘಟಿತವಾಗಿ ಒತ್ತಡ ಹೇರುವುದು ಅಗತ್ಯವಾಗಿದೆ’ ಎಂದರು.

ಬೆಂಗಳೂರಿನ ಬಿಬಿಎಂಪಿ ವೈದ್ಯಾಧಿಕಾರಿ ಡಾ.ಸುಪುತ್ರಗೌಡ ಮಾತನಾಡಿದರು. ಮಿಸ್ ಯೂನಿವರ್ಸ್ ಆಫ್ ಕರ್ನಾಟಕ ಡಾ.ವಂಶಿಉದಯ್, ಖಳನಟ ವಿಶ್ವರಾಜ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಪರಮೇಶ್‌, ಕಾರ್ಯದರ್ಶಿ ಲೋಹಿತ್ ಕೌಡಹಳ್ಳಿ, ರಾಜ್ಯ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್‌, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಎಂ.ಜೆ. ಸಚಿನ್ ಪಾಲ್ಗೊಂಡಿದ್ದರು.

‘ಭೂಮಿ ಮಾರಾಟ ಮಾಡದಿರಿ’

‘ಮಲೆನಾಡು ಭಾಗದಲ್ಲಿ ಕಾಫಿ ಬೆಳೆಯುವ ಭೂಮಿಯನ್ನು ನಿಜಕ್ಕೂ ತಾಯಿಯಂತೆ ಪ್ರೀತಿಯಿಂದ ಗೌರವಿಸಬೇಕು. ಹವಾಮಾನ ವೈಪರಿತ್ಯ ಬೆಲೆ ಏರಿಳಿತ ಇಂತಹ ಆಗೊಮ್ಮೆ ಹೀಗೊಮ್ಮೆ ಬರುವ ಸಮಸ್ಯೆಗಳು ಬ್ಯಾಂಕ್ ಸಾಲ ನೆಪದಲ್ಲಿ ಈ ಭಾಗದ ರೈತರು ಬೆಳೆಗಾರರು ಚಿನ್ನದಂತ ಭೂಮಿಯನ್ನು ಕಳೆದುಕೊಳ್ಳಬೇಡಿ. ಈಗಾಗಲೇ ಹೊರ ರಾಜ್ಯಗಳ ಉದ್ಯಮಿ ಶ್ರೀಮಂತರು ಕಾಫಿ ಜಮೀನುಗಳನ್ನು ಸಾಕಷ್ಟು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ದಯವಿಟ್ಟು ಬೆಳೆಗಾರರು ತಮ್ಮ ಭೂಮಿ ಮಾರಾಟ ಮಾಡಬೇಡಿ’ ಎಂದು ದೊಡ್ಡಣ್ಣ ಕಿವಿಮಾತು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.