ADVERTISEMENT

ಹಾಸನ: ಮರಳು ಅಕ್ರಮ ಸಂಗ್ರಹಕ್ಕೆ ₹2 ಕೋಟಿ ದಂಡ

ವಾರದೊಳಗೆ ದಂಡ ಪಾವತಿಸಲು ಗುತ್ತಿಗೆದಾರರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 12:42 IST
Last Updated 4 ಸೆಪ್ಟೆಂಬರ್ 2019, 12:42 IST
ಅರೆಕೆರೆಯಲ್ಲಿ ಸಂಗ್ರಹಿಸಿದ್ದ ಅಕ್ರಮ ಮರಳು ದಾಸ್ತಾನು
ಅರೆಕೆರೆಯಲ್ಲಿ ಸಂಗ್ರಹಿಸಿದ್ದ ಅಕ್ರಮ ಮರಳು ದಾಸ್ತಾನು   

ಹಾಸನ: ಸಕಲೇಶಪುರ ತಾಲ್ಲೂಕಿನ ಅರಕೆರೆ ಬಳಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗುತ್ತಿಗೆ ಸಂಸ್ಥೆಗೆ ₹ 2 ಕೋಟಿ ದಂಡ ವಿಧಿಸಿದ್ದಾರೆ.

ಗುತ್ತಿಗೆ ಸಂಸ್ಥೆಯ ಮಾಲೀಕ ಶರ್ಪುದ್ದೀನ್‌ ಅವರಿಗೆ ನೋಟಿಸ್‌ ನೀಡಿರುವ ಜಿಲ್ಲಾಧಿಕಾರಿ, ಅಕ್ರಮವಾಗಿ ಮರಳು ಸಂಗ್ರಹಿಸಿದ ತಪ್ಪಿಗೆ ₹ 25 ಲಕ್ಷ ದಂಡ, ಅದೇ ಮರಳನ್ನು ಕಾಮಗಾರಿಗೆ ಬಳಸಲು ಇಚ್ಛಿಸಿದಲ್ಲಿ ಪ್ರತಿ ಕ್ಯೂಬಿಕ್‌ ಮೀಟರ್‌ಗೆ ₹ 1700 ರಂತೆ ₹ 82 ಲಕ್ಷ ರಾಜಧಾನ, ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿ ಜೀವ ಸಂಕುಲಕ್ಕೆ ಹಾನಿ ಮಾಡಿದ್ದಕಾಗಿ ₹ 81 ಲಕ್ಷ ದಂಡ ಸೇರಿ ₹ 2,000,29,000 ಹಣವನ್ನು ವಾರದೊಳಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಸೌಭಾಗ್ಯ ಎಂಬುವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ 9 ಸಾವಿರ ಮೆಟ್ರಿಕ್‌ ಟನ್‌ ಮರಳು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಆಧರಿಸಿ ಜ. 10ರಂದು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದರು.

ADVERTISEMENT

ಸ್ಥಳದಲ್ಲಿದ್ದ ಓಷಿಯನ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ನೌಕರರಾದ ಜಹೀರುದ್ದೀನ್, ಮಹಮದ್‌ ಇರ್ಫಾನ್‌ ಅವರು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾದ ರಸ್ತೆ ಕಾಮಗಾರಿಗೆ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ಅದಕ್ಕೆ ಸಂಬಂಧಿಸಿದ ಪರವಾನಗಿ ಹಾಜರುಪಡಿಸಲು ನೌಕರರು ವಿಫಲರಾದರು.

‘ಮರಳು ದಾಸ್ತಾನು ಮಾಡಿರುವ ಪ್ರದೇಶ ಕೃಷಿ ಚಟುವಟಿಕೆಗೆ ಯೋಗ್ಯ ಸ್ಥಳವೆಂದು ಪರಿಶೀಲನೆಯಿಂದ ತಿಳಿದು ಬಂದಿದೆ. ಕಂದಾಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಮರಳು ದಾಸ್ತಾನು ಮಾಡಿದ್ದು ಕಾನೂನು ಬಾಹಿರವಾಗಿದೆ. ಸರ್ಕಾರಕ್ಕೆ ಬರಬೇಕಿದ್ದ ರಾಜಧನವನ್ನು ವಂಚಿಸಿ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ. ಆದ್ದರಿಂದ ಮರಳನ್ನು ಜಪ್ತಿ ಮಾಡಿ, ಹಿಟಾಚಿ, ಪವರ್‌ ಜನರೇಟರ್‌ ವಶಕ್ಕೆ ಪಡೆದು ಸಕಲೇಶಪುರ ಗ್ರಾಮಾಂತರ ಠಾಣೆ ಸುಪರ್ದಿಗೆ ನೀಡಲಾಗಿದೆ’ ಎಂದು ನೋಟಿಸ್‌ನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.