ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ನಿರ್ಲಕ್ಷ್ಯ ಸಲ್ಲ

ಅಧಿಕಾರಿಗಳಿಗೆ ರಾಜ್ ಕುಮಾರ್ ಕಟಾರಿಯಾ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:25 IST
Last Updated 5 ಜನವರಿ 2019, 13:25 IST
ಹಾಸನದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೀಕ್ಷಕ ರಾಜ್ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳ ಸಭೆ ನಡೆಸಿದರು.
ಹಾಸನದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೀಕ್ಷಕ ರಾಜ್ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ಮತದಾರರ ಪಟ್ಟಿ ಪರಿಷ್ಕರಣೆ ಅತ್ಯಂತ ಮಹತ್ವದ ವಿಷಯವಾಗಿದ್ದು, ಯಾರೂ ನಿರ್ಲಕ್ಷ್ಯವಹಿಸಬಾರದು ಎಂದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೀಕ್ಷಕ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜ್ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ನಡೆಸಿದ ಅವರು, ಯಾವುದೇ ಲೋಪಗಳಾಗದಂತೆ ಅಂತಿಮ ಪಟ್ಟಿ ಸಿದ್ದಪಡಿಸುವಂತೆ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಪಟ್ಟಿ ಪರಿಷ್ಕರಣೆ ಕುರಿತು ಬಂದಿರುವ ದೂರು, ಸಾಮಾನ್ಯವಾಗಿ ಕಂಡು ಬಂದಿರುವ ವಿಶೇಷ ಅಂಶ, ಮತದಾರರ ಪಟ್ಟಿ ಮುದ್ರಣ, ಸಾರ್ವಜನಿಕ ಪ್ರಕಟಣೆ, ರಾಜಕೀಯ ಪಕ್ಷದವರಿಗೆ ಹಂಚಿಕೆ ಮಾಡಲು ಕೈಗೊಳ್ಳುವ ಕ್ರಮ ಹಾಗೂ ಮತದಾರರ ಗುರುತಿನ ಚೀಟಿ ವಿತರಣೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಮಾಹಿತಿ ಪಡೆದರು.

ADVERTISEMENT

ಯುವ ಮತದಾರರು ಹೆಚ್ಚಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಸ್ವೀಪ್ ಚಟುವಟಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉತ್ತಮವಾಗಿ ಸಂಘಟಿಸಬೇಕು. ಬೂತ್ ಮಟ್ಟದ ಏಜೆಂಟ್ ಗಳ ಪಟ್ಟಿಯನ್ನು ಒದಗಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತೊಮ್ಮೆ ಸೂಚಿಸುವಂತೆ ತಿಳಿಸಿದರು.

ಮತದಾರರ ಅಂತಿಮ ಪಟ್ಟಿ ಸಿದ್ಧ ಪಡಿಸಲು ಕೈಗೊಳ್ಳಲಾಗುತ್ತಿರುವ ಕ್ರಮ, ಬೂತ್‌ ಮಟ್ಟದಿಂದ ತಾಲ್ಲೂಕು ಕಚೇರಿವರೆಗೆ ನಡೆಸಲಾಗುತ್ತಿರುವ ಚಟುವಟಿಕೆಗಳ ಬಗ್ಗೆ ರೋಹಿಣಿ ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರಿಯಾಂಕ, ಉಪವಿಭಾಗಾಧಿಕಾರಿಗಳಾದ ಎಚ್.ಎಲ್. ನಾಗರಾಜ್, ಲಕ್ಷ್ಮಿಕಾಂತ್ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.