
ಅರಕಲಗೂಡು: ವೈಜ್ಞಾನಿಕವಾಗಿ ಸಾವಯವ ಮಾದರಿಯ ಸಮಗ್ರ ಕೃಷಿ ಪದ್ದತಿಗೆ ಒತ್ತು ನೀಡಿದ ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಪ್ರಗತಿಪರ ಕೃಷಿಕ ಎಂ.ಸಿ. ರಂಗಸ್ವಾಮಿ ಅವರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಮಾಡಿರುವ ಸಾಧನೆ ಚರಿತ್ರಾರ್ಹ.
ಮಗ್ಗೆ ಮನೆತನದ ರಂಗಸ್ವಾಮಿ, ಅಡಿಕೆ, ತೆಂಗು, ಕಾಫಿ, ಏಲಕ್ಕಿ ಹಾಗೂ ಹಲವಾರು ತೋಟದ ಬೆಳೆಗಳಲ್ಲದೇ ಆದಾಯ ಮೂಲದ ಮಿಶ್ರ ಬೆಳೆಗಳನ್ನು ಬೆಳೆದು ಕೃಷಿ ಭೂಮಿಯನ್ನು ಬಂಗಾರವಾಗಿಸಿದ್ದಾರೆ. ಪರಿಸರ ಪ್ರೀತಿ ಹೊಂದಿರುವ ಇವರು, ಜಮೀನಿನಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ, ಅರಣ್ಯ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಚಂದನವನಗೊಳಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.
ಪದವಿ ಪಡೆದು ಸರ್ಕಾರಿ ಕೆಲಸ ನೆಚ್ಚಿಕೊಳ್ಳದ ಇವರು, ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರ ವೀಕ್ಷಿಸಿ, ಕೃಷಿ ಮೇಲಿನ ಪ್ರಭಾವಕ್ಕೆ ಒಳಗಾಗದರು. ಪ್ರೀತಿಯಿಂದ ಬೇಸಾಯ ವೃತ್ತಿಯಲ್ಲಿ ತೊಡಗಿಸಿಕೊಂಡು ಕೃಷಿ ನೆಮ್ಮದಿ ಕಂಡುಕೊಂಡಿದ್ದಾರೆ. ಬಂಗಾರದ ಮನುಷ್ಯ ಚಲನಚಿತ್ರ ಕೃಷಿಯಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದು, ಕೃಷಿ ಬಗ್ಗೆ ಅಪಾರ ಪ್ರೀತಿಗೆ ಕಾರಣವಾಯಿತು ಎನ್ನುತ್ತಾರೆ ರಂಗಸ್ವಾಮಿ.
ಕೃಷಿಕ ಒಂದೇ ಬೆಳೆಗೆ ಅಂಟಿಕೊಳ್ಳಬಾರದು. ವೈವಿಧ್ಯತೆ ಕಾಪಾಡಿಕೊಂಡಾಗ ಕೃಷಿ ನಿರಂತರವಾಗುತ್ತದೆ ಹಾಗೂ ಲಾಭದಾಯಕವಾಗುತ್ತದೆ ಎಂಬುದು ಅವರ ಸ್ಪಷ್ಟ ನಂಬಿಕೆ. 70ರ ದಶಕದಲ್ಲೇ 80 ಸಾವಿರ ಕೆ.ಜಿ. ಹೊಗೆಸೊಪ್ಪು ಉತ್ಪಾದಿಸಿದ ಹೆಗ್ಗಳಿಕೆ ಇವರದ್ದು.
ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾದ ಸಾವಯವ ಕೃಷಿ ಪದ್ದತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಕ್ಲಿಷ್ಟಕರವಾಗಿದ್ದ ತಂಬಾಕು ಮಡಿ ಪದ್ದತಿಯನ್ನು ಸರಳವಾಗಿ, ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಪಡಿಸಿ ತಂಬಾಕು ಮಂಡಳಿಯ ರಾಷ್ಟ್ರ ಮಟ್ಟದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಹೈನುಗಾರಿಕೆಗೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಡೈರಿ ಫಾರ್ಮರ್ ಅವಾರ್ಡ್ ಪಡೆದಿದ್ದಾರೆ. ಎಚ್.ಡಿ. ದೇವೇಗೌಡ ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಮೊದಲ ವರ್ಷದಲ್ಲಿಯೇ ಪಡೆದವರು ಎಂ.ಸಿ. ರಂಗಸ್ವಾಮಿ. ಕರ್ನಾಟಕ ಪಶು ವೈದ್ಯಕೀಯ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗದಿಂದ ಹೈನುಗಾರಿಕೆ ಸಾಧನೆಗೆ ಇವರನ್ನು ಪುರಸ್ಕರಿಸಿ ಗೌರವಿಸಲಾಗಿದೆ.
1978ರಲ್ಲಿಯೇ ಸಕ್ರಿಯವಾಗಿ ರಾಜಕಾರಣವನ್ನು ಪ್ರವೇಶಿಸಿ ಅರಕಲಗೂಡು ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಕೃಷಿಕ ಸಮಾಜದ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸನ ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ತೆಂಗು ನುಸಿ ಪೀಡೆ ಬಾಧೆ ಕುರಿತು ಅಧ್ಯಯನ ನಡೆಸಿ, ಪರಿಹಾರ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅನೇಕ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
2024ರಲ್ಲಿ ಕೃಷಿ ಕ್ಷೇತ್ರದ ಸಮಗ್ರ ಸೇವೆಯನ್ನು ಪರಿಗಣಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2025 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಷಿಯಲ್ಲಿ ಸಫಲತೆ ಸಾಧಿಸುವ ಹುಚ್ಚಿರಬೇಕು. ಶ್ರಮ ಸಮಯಕ್ಕೆ ಬೆಲೆಕೊಟ್ಟು ನಾವೇ ವಿಜ್ಞಾನಿಗಳೆಂದು ಭಾವಿಸಿ ನಿತ್ಯ ಜಮೀನಿಗೆ ತೆರಳಿ ಬೆಳೆಗಳನ್ನು ಆರೈಕೆ ಮಾಡಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬೇಕು.ಎಂ.ಸಿ. ರಂಗಸ್ವಾಮಿ, ಪ್ರಗತಿಪರ ಕೃಷಿಕ
ಹೊಸ ಬೆಳೆಗಳ ಪ್ರಯೋಗ ಕೃಷಿಕನ ಹೊಲಗದ್ದೆಗಳು ಕೂಡ ಪ್ರಯೋಗಾಲಯವಿದ್ದಂತೆ. ಇಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿರಬೇಕು ಎಂಬುದು ಅವರ ನಂಬಿಕೆ. ಇದಕ್ಕೆ ಪೂರಕವಾಗಿ ಆರಂಭದಿಂದಲೂ ಹೊಸ ಹೊಸ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಕೂಡ ಪ್ರಯೋಗಾತ್ಮಕವಾಗಿ ತಮ್ಮ ಜಮೀನಿನಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ. ಕಾಫಿ ಕಾಳುಮೆಣಸು ಏಲಕ್ಕಿಯಂತಹ ಮಲೆನಾಡಿನ ಬೆಳೆಗಳನ್ನು ಹುಲುಸಾಗಿ ಬೆಳೆದಿದ್ದಾರೆ. ಸ್ವತಃ ಕೃಷಿ ಕಾಯದಲ್ಲಿ ತೊಡಗಿ ಸಮಗ್ರ ಕೃಷಿಯನ್ನು ಅನುಷ್ಠಾನಗೊಳಿಸಿದ್ದಾರೆ. ತಮ್ಮ ಜಮೀನಿನಲ್ಲಿ ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು ಮೆಕ್ಕೆ ಜೋಳ ಜೋಳ ಅಲಸಂದೆ ಕುದುರೆ ಮಸಾಲೆ ಮತ್ತು ಬೇಲಿ ಮೆಂತ್ಯವನ್ನು ಬೆಳೆಯುತ್ತಿದ್ದು ಇದರಿಂದ ಸ್ಟೈಲೇಜ್ ತಯಾರಿಸುತ್ತಿದ್ದಾರೆ. ಸ್ಟೈಲೇಜ್ ಸಂಗ್ರಹಣೆಗಾಗಿ ಬೃಹತ್ ಗಾತ್ರದ 12 ಸಂಗ್ರಹಣಾಗಾರಗಳನ್ನು ನಿರ್ಮಿಸಿದ್ದು ಪ್ರತಿ ಸಂಗ್ರಹಣಾಗಾರದಲ್ಲಿ 400 ಟನ್ ಸ್ಟೈಲೇಜ್ ಸಂಗ್ರಹಿಸಬಹುದು. ಜತೆಗೆ ಮೇವು ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಬಂಡೂರು ಕುರಿಗಳು ಹಾಗೂ ಜಮುನ ಪಾರಿ ಮೇಕೆ ಸಾಕಣೆ ಮಾಡಲಾಗಿದೆ. ಮೀನು ಸಾಕಾಣೆ ಹಾಗೂ ಜೇನು ಸಾಕಣೆ ಕೈಗೊಂಡಿದ್ದಾರೆ.
ಪ್ರಯೋಗ ಶಾಲೆಯಾದ ಜಮೀನು ತೋಟಗಾರಿಕಾ ಬೆಳೆಗಳಲ್ಲಿ ಅವಕಾಡೋ ವೆನಿಲ್ಲ ನಲ್ಯಾಣೆ ಗೋಲ್ಡ್ ತಳಿ ಏಲಕ್ಕಿ ಕಾಫಿ ಅಡಿಕೆ ತೆಂಗು ಜಾಯಿಕಾಯಿ ಮತ್ತು ವೈವಿಧ್ಯಮಯ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಅರಣ್ಯ ಕೃಷಿ ಮಹತ್ವವನ್ನು ಅರಿತು ಶ್ರೀಗಂಧದ ಸಿಲ್ವರ್ ತೇಗ ಹೆಬ್ಬೇವು ಮಹಾಗನಿ ಆಗರ್ ಮರಗಳನ್ನು ಬೆಳೆಸಲಾಗಿದೆ. ಜಮೀನಿನ ಬದುಗಳಲ್ಲಿ ನೇರಳೆ ಹೆಬ್ಬೇವು ಮತ್ತು ತೇಗದ ಮರಗಳನ್ನು ಬೆಳೆದಿದ್ದು ಹಸಿರು ಸಮೃದ್ಧಿಯಿಂದ ಕೂಡಿದೆ. ತಂತ್ರಜ್ಞಾನದೊಂದಿಗೆ ಸಾವಯವ ಕೃಷಿ ಮಾಡುವ ಬಗ್ಗೆ ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡುತ್ತಾರೆ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಜ್ಞಾನಿಗಳು ಮತ್ತು ಸಂಶೋಧಕರು ಪ್ರಾಯೋಗಿಕ ಕೃಷಿ ಅನುಭವವನ್ನು ಪಡೆಯಲು ರಂಗಸ್ವಾಮಿ ಅವರ ಕೃಷಿ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಾರೆ.
ಇಸ್ರೇಲ್ ಮಾದರಿ ಹೈನುಗಾರಿಕೆ ಇಸ್ರೇಲ್ ತಂತ್ರಜ್ಞಾನ ಅವಳಡಿಸಿಕೊಂಡು ಹೈನುಗಾರಿಕೆಯಲ್ಲಿ ಯಶ ಕಂಡುಕೊಂಡಿದ್ದಾರೆ. 10 ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಿಸಿ 1ಸಾವಿರಕ್ಕೂ ಹೆಚ್ಚಿನ ಎಚ್.ಎಫ್. ಹಸುಗಳನ್ನು ಸಾಕುತ್ತಿದ್ದಾರೆ. ನಿತ್ಯ 8ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿ ಹಾಲು ಕರೆಯುವುದು ಮೇವು ಉತ್ಪಾದಿಸುವುದು ಸಗಣಿ ಎತ್ತುವುದು ಎಲ್ಲವೂ ಆಧುನಿಕ ತಂತ್ರಜ್ಞಾನದಿಂದಲೇ ನಡೆಯುತ್ತದೆ. ಪ್ರಸ್ತುತ ಹಾಲು ಉತ್ಪಾದನಾ ಘಟಕ ಆರಂಭಿಸಿದ್ದು ರೈತರಿಂದ ನಿತ್ಯ 50ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತದೆ. ಈ ಹಾಲನ್ನು ಮಿಲ್ಕಿಂಗ್ ಹಾಗೂ ಆಲ್ ಅಬೌಟ್ ಮಿಲ್ಕ್ ಎಂಬ ಹೆಸರಲ್ಲಿ ಮಾರಾಟ ಮಾಡಲಾಗುತ್ತಿದೆ. ಆಲ್ ಅಬೌಟ್ ಮಿಲ್ಕ್ ಪ್ರೀಮಿಯಂ ಬ್ರಾಂಡ್ ಆಗಿದೆ. ಹಸುಗಳಿಂದ ಒತ್ತಡ ರಹಿತವಾಗಿ ಪಡೆಯುವ ಹಾಲು ಗುಣಮಟ್ಟದ ಪೇಪರ್ ಪ್ಯಾಕಿಂಗ್‌ನಲ್ಲಿ ಶುಚಿತ್ವ ಕಾಯ್ದುಕೊಂಡು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಇದು ರಾಜ್ಯದಲ್ಲೇ ಮೈಲುಗಲ್ಲಾದ ಕೃಷಿಕನ ಸಾಧನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.