
ಅರಸೀಕೆರೆ: ಮೇಕೆದಾಟು ಅಣೆಕಟ್ಟು ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವುದನ್ನು ಸ್ವಾಗತಿಸಿದ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದರು.
ನಗರದ ಪಿಪಿ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಿಹಿ ತಿನಿಸುವ ಮೂಲಕ ಪರಸ್ಪರ ಸಂತಸ ಹಂಚಿಕೊಂಡರು.
ಶಾಸಕ ಶಿವಲಿಂಗೇಗೌಡ ಮಾತನಾಡಿ, ನ್ಯಾಯಸಮ್ಮತವಾಗಿ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ವಿನಾಕಾರಣ ನೆರೆಯ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತ ಬಂದಿತ್ತಲ್ಲದೇ, ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯದ ಪರ ತೀರ್ಪು ನೀಡಿರುವುದು ಸಂತಸದ ವಿಷಯ ಎಂದು ಹೇಳಿದರು.
ಮೇಕೆದಾಟು ಯೋಜನೆ ಬೆಂಗಳೂರಿನ ಜನತೆಗೆ ವರದಾನವಾಗಿದೆ. ಅಂದುಕೊಂಡಂತೆ ಈ ಯೋಜನೆ ಅನುಷ್ಠಾನಗೊಂಡಲ್ಲಿ ರಾಜಧಾನಿಯಲ್ಲಿ ವಾಸಿಸುತ್ತಿರುವ ಕೋಟ್ಯಂತರ ಜನತೆಯ ನೀರಿನ ದಾಹ ತಣಿಸಲಿದೆ. ಹಾಗಾಗಿ ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭದ್ರಾ ಮೇಲ್ಡಂಡೆ ಯೋಜನೆಯ ಅನುಷ್ಠಾನಕ್ಕೆ ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ₹ 5ಸಾವಿರ ಕೋಟಿ ನೀಡುವುದಾಗಿ ಘೋಷಣೆ ಮಾಡಿತು. ಆದರೆ ಇಲ್ಲಿವರೆಗೂ ಯಾವುದೇ ಅನುದಾನ ನೀಡಿಲ್ಲ ಈ ನಿಟ್ಟಿನಲ್ಲಿ ಸಹ ಕೇಂದ್ರ ಸರ್ಕಾರ ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ‘ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡಿಗೂ ಲಾಭವಾಗಲಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜ್ಯ ಮಾತ್ರವಲ್ಲ ದೇಶದಲ್ಲಿ ಗಮನ ಸೆಳೆದಿತ್ತು’ ಎಂದರು.
ನಗರಸಭೆಯ ಅಧ್ಯಕ್ಷ ಎಂ. ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಕಾಂಗ್ರೆಸ್ ಮುಖಂಡರಾದ ವೆಂಕಟಮುನಿ, ಮಂಜರಾಜ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರ ನಾಯ್ಕ, ಸಿಕಂದರ್, ಸುಬ್ರಹ್ಮಣ್ಯ ಬಾಬು, ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಇದ್ದರು.
ಹಾಸನದಲ್ಲೂ ಕಾಂಗ್ರೆಸ್ ಸಂಭ್ರಮಾಚರಣೆ
ಹಾಸನ: ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಿಕ್ಕ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿ ಎದುರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಯೋಜನೆಗೆ 7 ವರ್ಷಗಳಿಂದ ಅಡ್ಡಗಾಲು ಹಾಕುತ್ತಿದ್ದ ತಮಿಳುನಾಡಿಗೆ ಈ ಮೂಲಕ ಮುಖಭಂಗ ಆಗಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಯೋಜನೆ ಮುಂದುವರಿಸಲು ಕರ್ನಾಟಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಪೀಠ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು. ಮುಖಂಡರಾದ ಬನವಾಸೆ ರಂಗಸ್ವಾಮಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಎಚ್.ಕೆ. ಮಹೇಶ್ ರಘು ದಾಸರಕೊಪ್ಪಲು ವೆಂಕಟೇಗೌಡ ಆರೀಫ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.