ADVERTISEMENT

ಹಾಸನ: ಕಾರ್ಗಿಲ್‌ ಯೋಧರ ಸ್ಮರಣೆ, ಪುಷ್ಪನಮನ

ಜಿಲ್ಲೆಯ ವಿವಿಧೆಡೆ ಕಾರ್ಗಿಲ್ ವಿಜಯ ದಿವಸ್‌ ಆಚರಣೆ: ಯೋಧರ ಹೋರಾಟ ನೆನಪಿಸಿದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:34 IST
Last Updated 27 ಜುಲೈ 2021, 2:34 IST
ಹಾಸನದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಉದ್ಯಾನದಲ್ಲಿ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್‌, ಪೊಲೀಸ್ ಇನ್‌ಸ್ಪೆಕ್ಟರ್‌ ದೇವೇಂದ್ರ ಹಾಗೂ ಇತರರನ್ನು ಸನ್ಮಾನಿಸಲಾಯಿತು
ಹಾಸನದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಉದ್ಯಾನದಲ್ಲಿ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್‌, ಪೊಲೀಸ್ ಇನ್‌ಸ್ಪೆಕ್ಟರ್‌ ದೇವೇಂದ್ರ ಹಾಗೂ ಇತರರನ್ನು ಸನ್ಮಾನಿಸಲಾಯಿತು   

ಹಾಸನ: ‘ನಾಡಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಯೋಧರಂತೆ ಶ್ರಮಿಸಿ ದೇಶವನ್ನು ಬಲಿಷ್ಠಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಉದ್ಯಾನದಲ್ಲಿ ರಾಷ್ಟ್ರೀಯ ಜಿಲ್ಲಾ ಸೈನಿಕರ ಸಮನ್ವಯ ಸಮಿತಿ, ಮಾಜಿ ಸೈನಿಕರ ಸಂಘ ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಯುದ್ಧಸ್ಮಾರಕಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದ ಅವರು, ‘ಇಂದಿನ ಯುವ ಜನತೆಯು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಬೇಕು’ ಎಂದು ಹೇಳಿದರು.

‘ಕಾರ್ಗಿಲ್ ಯುದ್ಧ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದು, ಪ್ರತಿಯೊಬ್ಬ ಯೋಧನ ವೀರ ಮರಣದ ಹಿಂದೆ ಎಷ್ಟೋ ತ್ಯಾಗಗಳು ಅಡಗಿವೆ. ಹಾಗಾಗಿ ಯೋಧರಿಗೆ ಗೌರವ ಅರ್ಪಿಸುವುದು ನಮ್ಮ ಕರ್ತವ್ಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಅವಕಾಶ ಸಿಗುವುದು ಸುದೈವ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್ ಮಾತನಾಡಿ, ‘22 ವರ್ಷಗಳ ಹಿಂದೆ ನಾವು ಗಳಿಸಿದಂತಹ ಜಯದ ಸ್ಮರಣೆಯನ್ನು ಇಂದು ಆಚರಿಸುತ್ತಿದ್ದೇವೆ. ನಮ್ಮ ಬಾವುಟ ಹಾರುತ್ತಿರುವುದು ನಮ್ಮ ಸೈನಿಕರಿಂದ. ಪ್ರತಿಯೊಬ್ಬ ಸೈನಿಕನ ಒಂದು ಹನಿ ರಕ್ತವೂ ದೇಶದ ಅಭಿವೃದ್ಧಿಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಇದೆ’ ಎಂದು ಹೇಳಿದರು.

ನಿವೃತ್ತ ಬ್ರಿಗೇಡಿಯರ್ ಚಂದ್ರಶೇಖರ್ ಮಾತನಾಡಿ, ‘ಕಾರ್ಗಿಲ್ ಯುದ್ಧವು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಕಾರ್ಗಿಲ್‍ನ ಬೆಟ್ಟಗಳಲ್ಲಿ ಒಳನುಸುಳಿ ಬಂದ ಶತ್ರು ಪಾಕಿಸ್ತಾನ ಯೋಧರನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸಿದ ನೆನಪಿನ ದಿನ. 83 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ 527 ಯೋಧರು ವೀರಮರಣ ಹೊಂದಿದರು’ ಎಂದು ಹೇಳಿದರು.

ಯುದ್ಧ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛ ಇರಿಸಿ ಮತ್ತು ನಮನ ಅರ್ಪಿಸುವ ಮೂಲಕ ಯೋಧರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಸಾಗರ್, ಖಜಾಂಚಿ ಕಾಳೇಗೌಡ ಹಾಗೂ ಸಂಘದ ಪದಾಧಿಕಾರಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ ದೇವೇಂದ್ರ, ರೋಟರಿ ಸಂಸ್ಥೆಯ ಹಾಗೂ ಇನ್ನರ್ ವೀಲ್ ಕ್ಲಬ್‍ನ ಪದಾಧಿಕಾರಿಗಳು, ಎ.ಬಿ.ವಿ.ಪಿ.ಯ ವಿದ್ಯಾರ್ಥಿಗಳು, ಎನ್.ಸಿ.ಸಿ ತಂಡದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.