ADVERTISEMENT

ರಸ್ತೆ ಅಗೆದು ಮರೆತ ಗುತ್ತಿಗೆದಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:53 IST
Last Updated 14 ಜುಲೈ 2022, 5:53 IST
ಹಾಸನದ ದೊಡ್ಡ ಗರಡಿ ಬೀದಿ ವರ್ತಕರು, ನಿವಾಸಿಗಳು ಪ್ರತಿಭಟನೆ ನಡೆಸಿದರು.
ಹಾಸನದ ದೊಡ್ಡ ಗರಡಿ ಬೀದಿ ವರ್ತಕರು, ನಿವಾಸಿಗಳು ಪ್ರತಿಭಟನೆ ನಡೆಸಿದರು.   

ಹಾಸನ: ಹೊಸ ರಸ್ತೆ ಮಾಡುವುದಾಗಿ ಭೂಮಿ ಅಗೆದು 6 ತಿಂಗಳಾದರೂ ಕಾಮಗಾರಿ ನಡೆಸದೇ ಇರುವುದರಿಂದ ರಸ್ತೆ ಕೆಸರುಮಯವಾಗಿದೆ. ವಾಹನ ಇರಲಿ, ಜನರೂ ಓಡಾಡದಂತಾಗಿದೆ ಎಂದು ಆರೋಪಿಸಿ ನಗರದ ದೊಡ್ಡ ಗರಡಿ ಬೀದಿ ವರ್ತಕರು ಮತ್ತು ನಿವಾಸಿಗಳು ಪ್ರತಿಭಟನೆ ನಡೆಸಿದರು.

ನಗರದ ಕಸ್ತೂರ ಬಾ ರಸ್ತೆಗೆ ಹೊಂದಿಕೊಂಡಿರುವ ದೊಡ್ಡಗರಡಿ ಬೀದಿಯಲ್ಲಿ ಹೊಸ ರಸ್ತೆ ಮಾಡುವುದಾಗಿ ಜೆಸಿಬಿ ಮೂಲಕ ರಸ್ತೆ ಅಗೆದು 6 ತಿಂಗಳು ಕಳೆದಿವೆ. ಇದುವರೆಗೂ ರಸ್ತೆ ಮಾಡಿಲ್ಲ ಎಂದು ದೂರಿದರು.

ಇದೀಗ ಮಳೆ ಜೋರಾಗಿದ್ದು, ನಿತ್ಯ ತೊಂದರೆಯಾಗುತ್ತಿದೆ. ಅದರಲ್ಲೂ ಶಾಲಾ–ಕಾಲೇಜು ಮಕ್ಕಳಿಗೆ ಓಡಾಡುವುದಕ್ಕೂ ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವುದು ಗ್ಯಾರಂಟಿ. ಈಗಾಗಲೇ ವೃದ್ಧರು ಮತ್ತು ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಈ ಭಾಗದ ಅಂಗಡಿಗಳಿಗೆ ಗ್ರಾಹಕರು ಬಾರದೇ ವ್ಯಾಪಾರ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲೇ ಕೋವಿಡ್‌–19ನಿಂದ ಆರ್ಥಿಕ ನಷ್ಟ ಅನುಭವಿಸಿದ್ದು, ಈಗ ಇನ್ನೊಂದು ರೀತಿಯಲ್ಲಿ ಪೆಟ್ಟು ಬಿದ್ದಿದೆ. ಕೂಡಲೇ ರಸ್ತೆ ಸರಿಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ನಿವಾಸಿಗಳಾದ ಮಣಿಕಂಠ, ಪ್ರಕಾಶ್, ನರಪತ್ ಸಿಂಗ್, ನಾರಾಯಣ ಸಿಂಗ್, ಪ್ರಮೋದ್, ವಿಕ್ಕಿ, ಹರೀಶ್, ಮಹಾವೀರ್ ಜೈನ್, ರಂಗನಾಥ್, ಅಭಿಷ್, ಸುರೇಶ್‌ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.