ADVERTISEMENT

ಶ್ರವಣಬೆಳಗೊಳಕ್ಕೆ ಸಚಿವ‌ ಗೋಪಾಲಯ್ಯ ಭೇಟಿ: ಮಳೆ ಹಾನಿ ವೀಕ್ಷಣೆ

ಕಾಮಗಾರಿ‌‌ ಮುಗಿಯುವವರೆಗೆ ವಿಂಧ್ಯಗಿರಿ‌‌ ಪ್ರವೇಶ‌ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 15:36 IST
Last Updated 3 ಆಗಸ್ಟ್ 2022, 15:36 IST
   

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಬುಧವಾರ ಇತಿಹಾಸ ಪ್ರಸಿದ್ದ ಶ್ರವಣಬೆಳಗೊಳದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಾಸನ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ವಿವಿಧ ತಾಲ್ಲೂಕುಗಳಲ್ಲಿ ಮನೆ, ಬೆಳೆ ಹಾನಿಗೀಡಾಗಿವೆ ಎಂದರು.

ಇನ್ನೂ ಮೂರು ದಿನ ರೆಡ್ ಅಲರ್ಟ್ ಘೋಷಣೆಯಾಗಿದೆ ಎಲ್ಲಾ ಆಧಿಕಾರಿಗಳಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಇತಿಹಾಸ ಪ್ರಸಿದ್ಧವಾದ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿರುವ ಕೋಟೆ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಕುಸಿದಿದೆ.‌ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇನೆ. ತಕ್ಷಣ ಕೆಲಸ ಪ್ರಾರಂಭಿಸಲು ಸೂಚನೆ ಕೊಟ್ಟಿದ್ದೇನೆ. ಕೆಲಸ ಮುಗಿಯುವವರೆಗೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಸಂಬಂಧ ಸ್ವಾಮೀಜಿಗಳ ಅನುಮತಿ ಕೂಡ ಪಡೆಯಲಾಗಿದೆ ಎಂದು ಹೇಳಿದರು.

ಬೆಟ್ಟದ ಮೇಲೆ ಕೆಲಸ ಮಾಡುವುದು ತುಂಬಾ ಕಷ್ಟದ ವಿಷಯ. ಕಾಮಗಾರಿಗೆ ಬೇಕಾಗುವ ಅನುದಾನ ನೀಡಲು ಪ್ರವಾಸೋದ್ಯಮ ಸಚಿವರು ಒಪ್ಪಿದ್ದಾರೆ.‌ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದಲೂ ಅನುದಾನ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೆಲಸ ಮಾಡಲು ಸೂಚಿಸಿದ್ದೇವೆ ಎಂದರು.

ಜಿಲ್ಲೆಯ ಬಯಲುಸೀಮೆಯಲ್ಲಿ ಈ ಹಿಂದೆಂದೂ ಆಗದಷ್ಟು ಮಳೆಯಾಗಿದೆ.‌ಹಾಸನ ಮತ್ತು ಮಂಡ್ಯ ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಎಲ್ಲಾ ಅಧಿಕಾರಿಗಳಿಗೆ ಸಭೆ ನಡೆಸಿ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.