ADVERTISEMENT

ಚರ್ಚ್‌ ಅನುದಾನ ದುರ್ಬಳಕೆ: ಆರೋಪ

ಕ್ರೈಸ್ತ ಭಕ್ತ ಹೆಜಿನ್ ಕ್ವಡ್ರಸ್‌ ತನಿಖೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:25 IST
Last Updated 12 ಅಕ್ಟೋಬರ್ 2020, 8:25 IST
ಹೆಜಿನ್ ಕ್ವಡ್ರಸ್‌
ಹೆಜಿನ್ ಕ್ವಡ್ರಸ್‌   

ಹಾಸನ: ‘ಅರಸೀಕೆರೆಯ ಸಂತ ಮೇರಿಸ್‌ ಚರ್ಚ್‌ ಅಸೋಸಿಯೇಷನ್‌ ಹೆಸರಿನಲ್ಲಿ ಹಾಸನ ತಾಲ್ಲೂಕು ದಾಸಪುರ ಚರ್ಚ್‌ ಫಾದರ್‌ ಎ.ಶಾಂತರಾಜ್ ಅವರು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು, ಚರ್ಚ್‌ನ ನಿವೇಶನವನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ’ ಎಂದು ಚಿಕ್ಕಮಗಳೂರಿನ ಕ್ರೈಸ್ತ ಭಕ್ತ ಹೆಜಿನ್ ಕ್ವಡ್ರಸ್‌ ಆರೋಪಿಸಿದರು.

‘ಧರ್ಮ ಕ್ಷೇತ್ರದ ನಿಯಮಾನುಸಾರ ಅಧಿಕೃತವಾಗಿ ಸೆಂಟ್‌ ಮೇರಿಸ್‌ ಚರ್ಚ್ ಮತ್ತು ಅಭಿವೃದ್ಧಿ ಚಟುವಟಿಕೆಗಳು, ಧಾರ್ಮಿಕ ಕಾರ್ಯಗಳ ಅನುಷ್ಠಾನಕ್ಕಾಗಿ ಪ್ಯಾರಿಷ್‌ ಕೌನ್ಸಿಲ್‌ ಇರುವಾಗಲೇ 2008ರಲ್ಲಿ ಚರ್ಚ್‌ನ ಪ್ಯಾರಿಷ್‌ ಪ್ರಿಸ್ಟ್‌ ಆಗಿದ್ದ ಎ.ಶಾಂತರಾಜ್‌ ಅನಧಿಕೃತವಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸೆಂಟ್‌ ಮೇರಿಸ್‌ ಚರ್ಚ್‌ ಅಸೋಸಿಯೇಷನ್‌ ಎಂಬ 7 ಸದಸ್ಯರ ಸಮಿತಿ ರಚಿಸಿ ನೋಂದಣಿ ಮಾಡಿಸಿದ್ದಾರೆ. ಈ ಸಂಸ್ಥೆ ಮೂಲಕ ಕಾನೂನು ಬಾಹಿರವಾಗಿ ಹಣಕಾಸು ನಿರ್ವಹಣೆ ಮಾಡಿದ್ದಾರೆ’ ಎಂದು ಶನಿವಾರ ಸುದ್ದಿ ಗೋಷ್ಠಿಯಲ್ಲಿ ದೂರಿದರು.

‘ಹಣಕಾಸು, ಆಸ್ತಿ ಪರಭಾರೆ, ಅನುದಾನ ಪಡೆದುಕೊಳ್ಳುವಾಗ ಅಥವಾ ಸಾರ್ವಜನಿಕರಿಂದ ವಂತಿಕೆ ಸಂಗ್ರಹ ಮಾಡುವಾಗ ಬಿಷಪ್‌ ಅವರ ದೃಢೀಕರಣ ಪತ್ರವನ್ನು ಧರ್ಮ ಕೇಂದ್ರದ ಗುರುಗಳ ಮೂಲಕ ಸಂಬಂಧಪಟ್ಟವರಿಗೆ ಕೊಡಬೇಕು. ಚರ್ಚ್ ಆಡಳಿತಕ್ಕೆ ಒಳಪಡುವ ಪ್ಯಾರಿಷ್‌ ಕೌನ್ಸಿಲ್‌ನ ಅನುಮೋದನೆ ಪಡೆದು ಮುಂದುವರೆಯಬೇಕಾಗುತ್ತದೆ’ ಎಂದರು.

ADVERTISEMENT

‘ಆದರೆ, ಸೆಂಟ್‌ ಮೇರಿಸ್‌ ಚರ್ಚ್‌ನಲ್ಲಿ ಈ ಹಿಂದೆ ಗುರುಗಳಾಗಿದ್ದ ಎ.ಶಾಂತರಾಜ್‌ ತಮ್ಮ ಅಧ್ಯಕ್ಷತೆಯಲ್ಲಿ ಸಂತ ಮೇರಿಸ್‌ ಚರ್ಚ್‌‌ನ ನಿವೇಶನದ ದಾಖಲೆ ತಿದ್ದುಪಡಿ ಮಾಡಿ ಸಂತ ಮೇರಿಸ್‌ ಚರ್ಚ್‌ ಅಸೋಷಿಯಷನ್‌ ಕಾರ್ಯದರ್ಶಿ ಎಡ್ವರ್ಡ್‌ ಅವರ ಹೆಸರಿಗೆ ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ’ ಎಂದು ವಿವರಿಸಿದರು.

‘ಸಮುದಾಯ ಭವನ ನಿರ್ಮಾಣಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ ₹50ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೇವಲ ಗೋಡೆ ನಿರ್ಮಿಸಿ, ಆರ್‌ಸಿಸಿ ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ದೂರು ನೀಡಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಭಕ್ತರಾದ ರಾಕೇಶ್‌, ಪ್ರದೀಪ್‌ ಹಾಗೂ ಸಿಲ್ವಸ್ಟರ್‌ ಸಲ್ಡಾರಾ ಇದ್ದರು. ‘ಕೋವಿಡ್‌ ಕಾರಣದಿಂದ ಕಾಮಗಾರಿ ಸ್ಥಗಿತ. ಅರಸೀಕೆರೆ ಸಂತ ಮೇರಿ ಚರ್ಚ್‌ನ ಸಮುದಾಯ ಭವನ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಇಲಾಖೆ ಬಿಡುಗಡೆ ಮಾಡಿರುವ ಅನುದಾನ ದುರ್ಬಳಕೆಯಾಗಿಲ್ಲ. ಕೋವಿಡ್‌ ಕಾರಣದಿಂದ ಕಾಮಗಾರಿ ಸ್ಥಗಿತವಾಗಿದೆ’ ಎಂದು ಹಾಸನ ತಾಲ್ಲೂಕು ದಾಸಪುರ ಚರ್ಚ್‌‌ನ ಫಾದರ್‌ ಎ.ಶಾಂತರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ತೀವ್ರತೆ ತಗ್ಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಚರ್ಚ್‌‌ಗೆ ಸಂಬಂಧಿಸಿ ನಿವೇಶನ ಯಾರ ಹೆಸರಿಗೂ ವರ್ಗಾಯಿಸಿಲ್ಲ. ಅದು ಚರ್ಚ್‌ ಹೆಸರಿನಲ್ಲಿಯೇ ಇದೆ. ಈ ಸಂಬಂಧ ದಾಖಲೆ ನಮ್ಮ ಬಳಿ ಇದೆ. ಎಲ್ಲವೂ ಕಾನೂನಾತ್ಮಕವಾಗಿಇದೆ. ವೈಯಕ್ತಿಕ ದ್ವೇಷದಿಂದಈ ರೀತಿ ಆರೋಪ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.