ADVERTISEMENT

ಸಕಲೇಶಪುರ | ವಸತಿ ಯೋಜನೆ ದುರುಪಯೋಗ: ಹಣ ಮರುಪಾವತಿಗೆ ಆದೇಶ

ಜಾನೆಕೆರೆ ಆರ್‌.ಪರಮೇಶ್‌
Published 19 ನವೆಂಬರ್ 2023, 6:03 IST
Last Updated 19 ನವೆಂಬರ್ 2023, 6:03 IST
ಸಕಲೇಶಪುರ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ಸೋಮೇಗೌಡ ಆದೇಶದ ಪ್ರತಿ ಪ್ರದರ್ಶಿಸಿದರು
ಸಕಲೇಶಪುರ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ಸೋಮೇಗೌಡ ಆದೇಶದ ಪ್ರತಿ ಪ್ರದರ್ಶಿಸಿದರು   

ಸಕಲೇಶಪುರ: ಗ್ರಾಮ ಪಂಚಾಯಿತಿ ಸದಸ್ಯರೇ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಬಸವ, ಇಂದಿರಾ ಆವಾಸ್‌ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಮನೆ ಮಂಜೂರು ಮಾಡಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಚುನಾವಣಾ ಆಯೋಗ, ಕುರುಬತ್ತೂರು ಗ್ರಾಮ ಪಂಚಾಯಿತಿ ನಾಲ್ವರು ಮಾಜಿ ಸದಸ್ಯರಿಗೆ ಹಣ ವಾಪಸ್‌ ಕಟ್ಟುವಂತೆ ಆದೇಶ ಹೊರಡಿಸಿದೆ.

2015ರಿಂದ 2020ರ ಅವಧಿಯಲ್ಲಿ ತಾಲ್ಲೂಕಿನ ಕುರುಬತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ದೊಡ್ಡನಹಳ್ಳಿಯ ಲಕ್ಷ್ಮಿ, ಆದರಗೆರೆ ವಿಶ್ವನಾಥ್, ಬೆಳ್ಳೂರು ಮೋಹಿನಿ, ದೊಡ್ಡನಹಳ್ಳಿ ಜಿ.ಡಿ. ಮಧು ಅವರು ವಿವಿಧ ವಸತಿ ಯೋಜನೆ ಅಡಿ ಕಾನೂನು ಬಾಹಿರವಾಗಿ ಸರ್ಕಾರದ ಹಣ ಪಡೆದುಕೊಂಡಿರುವುದು ವಿಚಾರಣೆಯಿಂದ ಸಾಬೀತಾಗಿದೆ.

ಸರ್ಕಾರದ ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿ ಆಗಬೇಕಾದವರ ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆ ಹೊಂದಿರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸ ಮಾಡುವವರು ಮಾತ್ರ ಅರ್ಹ ಫಲಾನುಭವಿ ಆಗುತ್ತಾರೆ.

ADVERTISEMENT

ಆದರೆ ಈ ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬದಲ್ಲಿ 2–3 ಮನೆಗಳಿದ್ದರೂ, ಸುಳ್ಳು ದಾಖಲೆ ನೀಡಿ ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಸೋಮೇಗೌಡ ಅವರು ರಾಜ್ಯ ಚುನಾವಣಾ ಆಯೋಗಕ್ಕೆ 2019ರಲ್ಲಿ ದೂರು ದಾಖಲಿಸಿದ್ದರು.

ಸತತ 5 ವರ್ಷಗಳ ಕಾಲ 83 ವಿಚಾರಣೆ ನಡೆಸಿದ ಚುನಾವಣಾ ಆಯೋಗದ ಕಮಿಷನರ್ ಡಾ. ಬಿ. ಬಸವರಾಜು, 2023ರ ನವೆಂಬರ್ 11ರಂದು 33 ಪುಟಗಳ ಆದೇಶವನ್ನು ಆದೇಶ ಹೊರಡಿಸಿದ್ದಾರೆ.

ಸದಸ್ಯೆಯಾಗಿದ್ದ ಲಕ್ಷ್ಮಿ (ಬಸವ ವಸತಿ ಯೋಜನೆ) ₹ 1,12,300, ಮಾಜಿ ಸದಸ್ಯೆ ಮೋಹಿನಿ (ಇಂದಿರಾ ಆವಾಸ್‌ ಯೋಜನೆ) ₹1,19,800, ಜಿ.ಡಿ. ಮಧು (ಡಾ.ಬಿ.ಆರ್ ಅಂಬೇಡ್ಕರ ವಸತಿ ಯೋಜನೆ) ₹37,300 ರೂಪಾಯಿ ಹಾಗೂ ವಿಶ್ವನಾಥ್ ಅವರ ಪತ್ನಿ ನೇತ್ರಾವತಿ ಹೆಸರಿನಲ್ಲಿ (ಬಸವ ವಸತಿ ಯೋಜನೆ) ₹1,19,800 ಪಡೆದುಕೊಂಡಿದ್ದು, ಅದನ್ನು ಸರ್ಕಾರಕ್ಕೆ ವಾಪಸ್ ಕಟ್ಟುವಂತೆ ಆದೇಶ ಮಾಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಈ ಆರೋಪಿತ ಮಾಜಿ ಸದಸ್ಯರಿಂದ ಹಣ ಕೂಡಲೇ ವಸೂಲಿ ಮಾಡಿ, ಸರ್ಕಾರಕ್ಕೆ ಕಟ್ಟಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ನ್ಯಾಯಕ್ಕಾಗಿ 5 ವರ್ಷ ಹೋರಾಟ’

‘ನಿವೇಶನ ಮನೆ ಇಲ್ಲದ ನಿರ್ಗತಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸದಸ್ಯರೇ ಸುಳ್ಳು ಮಾಹಿತಿ ನೀಡಿ ಪಡೆದಿದ್ದು ಸರ್ಕಾರದ ವಸತಿ ಯೋಜನೆಯ ಫಲಾನುಭವಿಗಳಾಗುವ ಮೂಲಕ ವಂಚನೆ ಮಾಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಸೋಮೇಗೌಡ ತಿಳಿಸಿದರು. ‘ನ್ಯಾಯಕ್ಕಾಗಿ ಸತತ 5 ವರ್ಷ ಹೈಕೋರ್ಟ್ ವಕೀಲರನ್ನು ಇಟ್ಟುಕೊಂಡು ಬೆಂಗಳೂರು ಅಲೆದು ಸಮಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದೇನೆ. ಕಣ್ಣೆದುರು ಸಾಕ್ಷಿ ಸಮೇತ ನಡೆದಿರುವ ಅನ್ಯಾಯದ ವಿರುದ್ಧ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ’ ಎಂದು ಬೇಸರ ವ್ಯಕ್ತಪಡಿಸಿದರು.

‘2014ರಲ್ಲೇ ಅರ್ಜಿ ಸಲ್ಲಿಸಿದ್ದೆ’

‘2014ರಲ್ಲಿಯೇ ಬಸವ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದೆ. 2015ರಲ್ಲಿ ಕುರುಬತ್ತೂರು ಪಂಚಾಯಿತಿ ಸದಸ್ಯನಾಗಿ ಚುನಾಯಿತನಾದೆ. 2014ರಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲೆ ಮನೆ ಮಂಜೂರು ಆಗಿ ಹಣ ಪಡೆದಿದ್ದೇನೆ. ಮನೆ ಅವಶ್ಯಕತೆ ಇತ್ತು ಎಂಬುದಕ್ಕೆ ಗ್ರಾಮ ಪಂಚಾಯಿತಿಯಿಂದ ದೃಢೀಕರಣ ಪತ್ರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೆ’ ಎಂದು ಫಲಾನುಭವಿಯಾಗಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಶ್ವನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.