ಹಾಸನ: ಇಲ್ಲಿನ ಅರಸೀಕೆರೆ ರಸ್ತೆ ಬಳಿ ಇರುವ ಎಸ್.ಎಂ. ಕೃಷ್ಣ ನಗರದಲ್ಲಿ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಉದ್ಯಾನವನ್ನು ಮಾದರಿ ನೆನಪಿನ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲು ಭಾನುವಾರ ಆಯೋಜಿಸಿದ್ದ ಶ್ರಮದಾನಕ್ಕೆ, ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಮೇಯರ್ ಎಂ. ಚಂದ್ರೇಗೌಡ ಚಾಲನೆ ನೀಡಿದರು.
ಎ.ಟಿ. ರಾಮಸ್ವಾಮಿ ಮಾತನಾಡಿ, ಕೃಷ್ಣ ನಗರದಲ್ಲಿರುವ 4.5 ಎಕರೆ ಪ್ರದೇಶವನ್ನು ಉದ್ಯಾನಕ್ಕೆ ವಾಯು ವಿಹಾರಿಗಳಿಗೆ ಕಾಯ್ದಿರಿಸಲಾಗಿದೆ. ಈ ಉದ್ಯಾನ ನಿರ್ವಹಣೆ ಇಲ್ಲದಿರುವುದನ್ನು ಗಮನಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಸ್ವಚ್ಛ ಮಾಡುತ್ತಿದ್ದೇವೆ ಎಂದರು.
ಮಹಾನಗರ ಪಾಲಿಕೆ, ಹುಡಾ ಹಾಗೂ ಸಂಘ ಸಂಸ್ಥೆಯ ಸಹಕಾರ ಬೇಕು. ಅಧಿಕಾರಿ, ನೌಕರರು ಇಲ್ಲೊಂದು ಮಾದರಿ ಉದ್ಯಾನ ಮಾಡಬೇಕು ಎಂದು ತೀರ್ಮಾನಿಸಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ನೆನಪಿನ ಉದ್ಯಾನದಲ್ಲಿ ಜಪಾನ್ ಮಿಯಾವಾಕಿ ಮಾದರಿಯಲ್ಲಿ ಎಲ್ಲ ಮಾದರಿಯ ಹಣ್ಣು, ಔಷಧೀಯ ಸಸ್ಯಗಳ ವನ ನಿರ್ಮಾಣ ಮಾಡಲಾಗುವುದು ಎಂದರು. ನಿವೃತ್ತ ನೌಕರರು, ಹುಡಾ, ಮಹಾನಗರ ಪಾಲಿಕೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆ ಸೇರಿ ರಾಜ್ಯದಲ್ಲೇ ಗಮನ ಸೆಳೆಯುವಂತೆ, ಮಾದರಿ ಉದ್ಯಾನ ಮಾಡೋಣ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಈ. ಯೋಗೇಂದ್ರ, ಹಾಸನ ಲಯನ್ಸ್ ಕ್ಲಬ್ ಸದಸ್ಯ ವೆಂಕಟೇಗೌಡ, ಸ್ಕೌಟ್ ಅಂಡ್ ಗೈಡ್ಸ್ ಮುಖಂಡರಾದ ಕಾಂಚನಾಮಾಲಾ, ಆರ್.ಜಿ. ಗಿರೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ, ಆಕಾಶವಾಣಿಯ ವಿಜಯ ಅಂಗಡಿ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್, ಬಿ.ಶಿವರಾಂ, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಉಪಸ್ಥಿತರಿದ್ದರು.
ಪ್ರತಿ ಭಾನುವಾರ ಉದ್ಯಾನ ಸ್ವಚ್ಛತೆ, ಅಭಿವೃದ್ಧಿ ಸುತ್ತಲಿನ ನಿವಾಸಿಗಳು ಕೈಜೋಡಿಸಲು ಮನವಿ ವಿವಿಧೆಡೆಯಿಂದ ಬಂದಿದ್ದ ಸಂಘ–ಸಂಸ್ಥೆಗಳ ಪ್ರತಿನಿಧಿಗಳ ಶ್ರಮದಾನ
ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ಇಲ್ಲಿ ರಾಷ್ಟ್ರಿಯ ದರ್ಜೆಯ ಉದ್ಯಾನ ನಿರ್ಮಾಣ ಮಾಡಲು ಮುಂದಾಗಿದ್ದು ಸಹಕಾರಕ್ಕೆ ಮಹಾನಗರ ಪಾಲಿಕೆ ಸನ್ನದ್ಧವಾಗಿದೆ.ಎಂ. ಚಂದ್ರೇಗೌಡ ಮೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.