ADVERTISEMENT

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮಾರ್ಪಾಡು: ರೇವಣ್ಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 13:09 IST
Last Updated 11 ಡಿಸೆಂಬರ್ 2020, 13:09 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಭೂ ಸುಧಾರಣೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಆದರೆ ಈಗಲೂ ನನಗೆ ವಿರೋಧವಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ರೈತರಿಗೆ ಅನುಕೂಲವಾಗುವ ರೀತಿ ಮಾರ್ಪಾಡು ಮಾಡಲಾಗುವುದು’ ಎಂದು ಶಾಸಕ ಎಚ್‌.ಡಿ. ರೇವಣ್ಣ ಸ್ಪಷ್ಟನೆ ನೀಡಿದರು.

‘ಜೆಡಿಎಸ್‌ ಮನವಿಯ ಮೇರೆಗೆ ಕಾಯ್ದೆಯಲ್ಲಿ 79 ಎ ಮತ್ತು ಬಿ ತೆಗೆದು ಹಾಕಲಾಗಿದೆ. ಇದರಿಂದ ಕೃಷಿ ಜಮೀನು ಖರೀದಿಯ ಗರಿಷ್ಠ ಮಿತಿಯನ್ನು 248 ಎಕರೆಯಿಂದ 108 ಎಕರೆಗೆ ಇಳಿಸಲಾಗಿದೆ. ಅಲ್ಲದೆ ಪರಿಶಿಷ್ಟರ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ ಮಾಡುವಂತಿಲ್ಲ. ಈ ರೀತಿಯ ಅನೇಕ ಬದಲಾವಣೆ ಮಾಡಿರುವ ಕಾರಣ ಬೆಂಬಲಿಸಬೇಕಾಯಿತು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

‘ಎರಡೂ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್‌ ಮುಗಿಸಲು ಹೊರಟಿವೆ. ದೇವೇಗೌಡರು ಬದುಕಿರುವ ವರೆಗೂ ಜೆಡಿಎಸ್‌ ರೈತರ ಪರವಾಗಿಯೇ ಇರಲಿದೆ. ಹಿಂದೆ ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ ರಾಜ್ಯದಲ್ಲಿ ರೈತರ ₹34 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು’ ಎಂದು ಹೇಳಿದರು.

‘ಸಿ.ಎಂ ಯಡಿಯೂರಪ್ಪ ಅವರು ಎಲ್ಲಾ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನ ಒಂದು ಪಕ್ಷಕ್ಕೆ ಸೀಮಿತ ಅಲ್ಲ. ಅವರು ಜನರ ಸಿ.ಎಂ. ಅದೇ ರೀತಿ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸ ಕುರಿತು ಚರ್ಚಿಸಲು ಸಿ.ಎಂ ಭೇಟಿ ಮಾಡಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕಾಂಗ್ರೆಸ್‌ ಅಥವಾ ಬಿಜೆಪಿ ಪರವಾಗಿ ಜೆಡಿಎಸ್‌ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷದೊಂದಿಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೂ ಕಾರ್ಯಕರ್ತರ ಸಭೆ ಮಾಡಲಾಗಿದೆ. ಭಾನುವಾರ ಹಾಸನದಲ್ಲಿಯೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದರು.

‘ಜಿಲ್ಲೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಕೊಡುಗೆ ಏನು? ಯಾವ ನೈತಿಕತೆ ಇಟ್ಟುಕೊಂಡು ಜನರ ಮತ
ಕೇಳುತ್ತಾರೆ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಅನೇಕ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ನೀರಾವರಿ ಇಲಾಖೆ ಕಾಮಗಾರಿಗಳು 18 ತಿಂಗಳಿನಿಂದ ಸ್ಥಗಿತಗೊಂಡಿವೆ. ಚನ್ನಪಟ್ಟಣ ಕೆರೆ ಅಭಿವೃದ್ಧಿ ಕಾಮಗಾರಿಗೆ ತಡೆ ತರಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯ ಸಾಧನೆ ಎಂದರೆ ಗುಮಾಸ್ತನಿಂದ ಹಿಡಿದು ಎಂಜಿನಿಯರ್‌ಗಳ ವರೆಗೆ ಲಂಚ ಪಡೆದು ವರ್ಗಾವಣೆ ಮಾಡುವುದು. ಅಲ್ಲದೇ ಎಲ್ಲಾ ಇಲಾಖೆಗಳಲ್ಲಿಯೂ ಶೇಕಡಾ 12ರಷ್ಟು ವಸೂಲಿ ನಡೆಯುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.