ADVERTISEMENT

ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ತಿಂಗಳ ಜಾತ್ರೆ

ಭಕ್ತರ ಗಮನಸೆಳೆದ ಚಂದ್ರಮಂಡಲೋತ್ಸವ, ಪೂರ್ಣಿಮೆ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:43 IST
Last Updated 12 ಮೇ 2025, 14:43 IST
ಅರಸೀಕೆರೆ ತಾಲ್ಲೂಕಿನ ಯಾದಾಪುರದ ಜೇನುಕಲ್ಲು ಸಿದ್ಧೇಶ್ವರ ಸನ್ನಿಧಾನಕ್ಕೆ ತಿಂಗಳ ಜಾತ್ರೆ ಪ್ರಯುಕ್ತ ಸಹಸ್ರಾರು ಭಕ್ತರು ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು
ಅರಸೀಕೆರೆ ತಾಲ್ಲೂಕಿನ ಯಾದಾಪುರದ ಜೇನುಕಲ್ಲು ಸಿದ್ಧೇಶ್ವರ ಸನ್ನಿಧಾನಕ್ಕೆ ತಿಂಗಳ ಜಾತ್ರೆ ಪ್ರಯುಕ್ತ ಸಹಸ್ರಾರು ಭಕ್ತರು ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು   

ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಯಾದಾಪುರದ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ತಿಂಗಳ ಜಾತ್ರೆ ಪ್ರಯುಕ್ತ ಚಂದ್ರಮಂಡಲೋತ್ಸವ ಹಾಗೂ ಪೂರ್ಣಿಮೆ ಪೂಜೆಯೂ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಸ್ವಾಮಿಯ ಬೆಟ್ಟದಲ್ಲಿ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಇನ್ನಿತರ ವಿಧಿ ವಿಧಾನಗಳು ಜರುಗಿದವು. ನಂತರ ಪೂರ್ಣಿಮೆ ಹಾಗೂ ತಿಂಗಳ ಜಾತ್ರೆ ಬಂದಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತರು.

ಇತ್ತ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ರಾತ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ನಂತರ ಅಲಂಕೃತ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಆರೋಹಣ ಮಾಡಲಾಯಿತು. ಮಂಗಳವಾದ್ಯ ಹಾಗೂ ಧ್ವಜ ಕುಣಿತವು ಭಕ್ತರ ಮನ ತಣಿಸಿತು.

ADVERTISEMENT

ಪೂರ್ಣಿಮೆಯ ಚಂದ್ರನ ಬೆಳಕಲ್ಲಿ ಸ್ವಾಮಿಯ ಉತ್ಸವ ಎಲ್ಲರ ಗಮನ ಸೆಳೆಯಿತು. ಯಾದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಹುಣ್ಣಿಮೆ ಆದ್ದರಿಂದ ಸಾರಿಗೆ ಇಲಾಖೆಯವರು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದರು. ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಮಂಡಳಿ, ಭಕ್ತಮಂಡಳಿಯ ವಹಿವಾಟುದಾರರು ಸೇರಿದಂತೆ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.