ADVERTISEMENT

ಮುಚ್ಚುವ ಸ್ಥಿತಿಗೆ ಸರ್ಕಾರಿ ಶಾಲೆಗಳು

ಸಾಧಕರಿಗೆ ‘ಕುವೆಂಪು ವಿಶ್ವಮಾನವ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 14:39 IST
Last Updated 28 ಡಿಸೆಂಬರ್ 2018, 14:39 IST
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಹೇಮಾ ಅನಂತ್‌, ಉದಯರವಿ, ಹಂಪನಹಳ್ಳಿ ತಿಮ್ಮೇಗೌಡ, ಕಾಂತರಾಜು ಅವರನ್ನು ಸನ್ಮಾನಿಸಲಾಯಿತು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಹೇಮಾ ಅನಂತ್‌, ಉದಯರವಿ, ಹಂಪನಹಳ್ಳಿ ತಿಮ್ಮೇಗೌಡ, ಕಾಂತರಾಜು ಅವರನ್ನು ಸನ್ಮಾನಿಸಲಾಯಿತು.   

ಹಾಸನ: ‘ಜನಪ್ರತಿನಿಧಿಗಳು ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿರುವ ಕಾರಣ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ಬಂದಿವೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಕರ್ನಾಟಕ ವೀರಕನ್ನಡಿಗರ ಸೇನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕುವೆಂಪು 114ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಪರಿಷತ್‌ ಯಾವ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ಕೊಡುವುದಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳು ಇಲ್ಲದಿರುವುದೇ ಸರ್ಕಾರಿ ಶಾಲೆಗಳು ನೆಲ ಕಚ್ಚಲು ಕಾರಣ. 1ನೇ ತರಗತಿಯಿಂದಲೇ ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಕಲಿಕಾ ಪದ್ದತಿ ಜಾರಿಗೆ ತರುವ ಮೂಲಕ ಕನ್ನಡ ಶಾಲೆ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‌ಗೌಡ ಮಾತನಾಡಿ, ಕುವೆಂಪು ಅವರು ಇಡೀ ಪರಂಪರೆಯನ್ನು ಮೌಲ್ಯವಾಗಿ ತಿಳಿಸಿಕೊಟ್ಟವರು. ಅವರ ಕವನಗಳನ್ನು ಅನೇಕ ಕನ್ನಡ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಪಠ್ಯದಲ್ಲೂ ಸೇರಿದೆ. ಸಾಹಿತ್ಯ ಓದಿ ಅರ್ಥೈಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಸಂಸ್ಕೃತ ಇದ್ದಂತೆ ಕನ್ನಡದ ಹಿರಿಮೆ ಕೂಡ ಇತ್ತು’ ಎಂದು ನುಡಿದರು.

21ನೇ ವಯಸ್ಸಿಗೆ ಕುವೆಂಪು ಅವರ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಸಂದೇಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಮೊದಲು ಮಾನವೀಯತೆ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಾನಪದ ಕ್ಷೇತ್ರದ ಸಾಧನೆಗೆ ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ, ಸಾವಯವ ಕೃಷಿ ಕ್ಷೇತ್ರದಲ್ಲಿ ಹೇಮಾ ಅನಂತ್, ಪತ್ರಿಕಾ ಕ್ಷೇತ್ರದಲ್ಲಿ ಉದಯ ರವಿ ಹಾಗೂ ಪರಿಸರ ಕ್ಷೇತ್ರದಲ್ಲಿ ವೈ.ಬಿ.ಕಾಂತರಾಜು ಅವರಿಗೆ ‘ಕುವೆಂಪು ವಿಶ್ವಮಾನವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕೋಳಗುಂದ ಕ್ಷೇತ್ರ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ವೀರ ಕನ್ನಡಿಗರ ಸೇನೆ ಅಧ್ಯಕ್ಷ ಕೆ.ಟಿ.ರವೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿ ಬಿ.ಡಿ.ಶಂಕರೇಗೌಡ, ಮುಖಂಡ ಎ.ಎ.ನಂಜುಂಡ ಸ್ವಾಮಿ, ಸುಜಲ ಕಾಲೇಜು ವ್ಯವಸ್ಥಾಪಕ ಲೋಕೇಶ್, ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.