ಬೇಲೂರು: ಸೋಮವಾರ ನಿಗದಿಯಾಗಿದ್ದ ಪುರಸಭೆಯ 64 ಮಳಿಗೆಗಳ ಇ-ಪ್ರೊಕ್ಯುರ್‌ಮೆಂಟ್ ಹರಾಜು ಕೊನೆ ಕ್ಷಣದಲ್ಲಿ ರದ್ದಾಯಿತು.
ಮಳಿಗೆಗಳ ಹರಾಜಿನಲ್ಲಿ ಭಾಗವಹಿಸಲು ಇಎಂಡಿ ಮೊತ್ತ ಕಟ್ಟಲು ಅ.10ರವರೆಗೆ ಕಲಾವಕಾಶ ನೀಡಿ,ಅ.14ಕ್ಕೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿತ್ತು.
ಮಳಿಗೆಗಳಲ್ಲಿ ಹಾಲಿ ಬಾಡಿಗೆ ಇರುವ ವ್ಯಾಪಾರಿಗಳನ್ನು ಹೊರತುಪಡಿಸಿ, ಇಎಂಡಿ ಮೊತ್ತ ತುಂಬಿರುವ ಬಿಡ್ದಾರರು ಪಟ್ಟಣದಲ್ಲಿ ಗುಂಪು–ಗುಂಪಾಗಿ ಮಾತಾಡಿಕೊಳ್ಳುತ್ತಿದ್ದ ದೃಶ್ಯಗಳು ಸೋಮವಾರ ಕಂಡುಬಂದವು.
ಹಣವಂತರು, ಪ್ರಭಾವಿಗಳು, ಮಳಿಗೆಗಳ ಅವಶ್ಯಕತೆ ಇಲ್ಲದವರು ಹಣ ಮಾಡುವ ಉದ್ದೇಶದಿಂದ ಹರಾಜಿನಲ್ಲಿ ಭಾಗವಹಿಸಲು ಇಎಂಡಿ ಮೊತ್ತ ಕಟ್ಟಿ, ಮಳಿಗೆಗಳಲ್ಲಿ ಹಾಲಿ ಇರುವ ವ್ಯಾಪಾರಸ್ಥರ ಬಳಿ ತೆರಳಿ ನಾವು ನಿಮ್ಮ ಮಳಿಗೆಯನ್ನು ಹರಾಜಿನಲ್ಲಿ ಕೂಗಿಕೊಳ್ಳುತ್ತೇವೆ. ಸುಮ್ಮನಿರಲು ಹಣ ನೀಡಿ ಎಂದು ಕೇಳಿರುವ ಬಗ್ಗೆ ಪುರಸಭೆಗೆ ದಾಖಲಾತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಾವುದೇ ಅವ್ಯವಾರಗಳಿಲ್ಲದೆ, ಪಾರದರ್ಶಕವಾಗಿ ಟೆಂಡರ್ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು, ನಡೆದಿರುವ ಘಟನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಹರಾಜು ನಡೆಸಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಪತ್ರಿಕೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.