ADVERTISEMENT

ಪುರಸಭೆ: ಸಂಸದರ ಸಭೆಗೆ ಅಡ್ಡಿ- ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:54 IST
Last Updated 12 ಜುಲೈ 2025, 4:54 IST

ಹಾಸನ: ಚನ್ನರಾಯಪಟ್ಟಣ ಪುರಸಭೆಯಲ್ಲಿ ಜುಲೈ 9 ರಂದು ಸಂಸದ ಶ್ರೇಯಸ್ ಪಟೇಲ್ ಅವರಿಗೆ ಸಭೆ ನಡೆಸಲು ಅಡ್ಡಿಪಡಿಸಿದ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುರಸಭೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಶ್ರೇಯಸ್ ಪಟೇಲ್ ಚನ್ನರಾಯಪಟ್ಟಣ ಪುರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳಿಂದ ಪುರಸಭೆಗೆ ನಿರ್ದೇಶನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 9 ರಂದು ಮಧ್ಯಾಹ್ನ ಪುರಸಭೆಗೆ ಬಂದ ಸಂಸದರನ್ನು ಸಭೆ ನಡೆಸಲು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.

ಸಭಾಂಗಣದ ಕೀಯನ್ನು ಅಧ್ಯಕ್ಷ ಮೋಹನ್ ತಮ್ಮ ಜೇಬಿನಲ್ಲೇ ಇಟ್ಟುಕೊಂಡು, ಕಳೆದಿದೆ ಎಂದು ಸುಳ್ಳು ಹೇಳಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರಶ್ನಿಸಿದಾಗ ಕೀ ಕಳೆದು ಹೋಗಿದೆ ಎಂದು ಸುಳ್ಳು ಹೇಳಿದರು. ಬೀಗ ಒಡೆದು ಸಭೆ ನಡೆಸಬೇಕಾಯಿತು ಎಂದರು.

ADVERTISEMENT

ಸಂಸದರು ಬರುವ ಮುನ್ನ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭೆ ಅಧ್ಯಕ್ಷ ಮೋಹನ್ ಅವರನ್ನು ತಮ್ಮ ಕಾರಿನಲ್ಲಿ ಕರೆತಂದು ಪುರಸಭೆಯ ಎದುರು ಬಿಟ್ಟು ಹೋದರು. ಈ ಪ್ರಕರಣಕ್ಕೆ ಶಾಸಕ ಬಾಲಕೃಷ್ಣ ಅವರ ನಿರ್ದೇಶನ ಇದೆ ಎಂದು ಆರೋಪಿಸಿದರು.

ಸಂಸದರಿಗೆ ಸಭೆ ನಡೆಸಲು ಅವಕಾಶ ನೀಡದೇ ಅಗೌರವ ತೋರಿದ್ದಾರೆ. ಅಧ್ಯಕ್ಷರ ದುರ್ನಡತೆ ವಿರುದ್ಧ ನಾವು ಹೋರಾಟ ನಡೆಸಲಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದರು.

ಕಾಂಗ್ರೆಸ್ ಸದಸ್ಯರ ಆರೋಪದಲ್ಲಿ ಹುರುಳಿಲ್ಲ

ಹಾಸನ: ಚನ್ನರಾಯಪಟ್ಟಣ ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಕುರಿತು ಪುರಸಭೆ ಸದಸ್ಯ ಪ್ರಕಾಶ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪುರಸಭೆ ಅಧ್ಯಕ್ಷ ಸಿ.ಎನ್. ಮೋಹನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 9ರಂದು ಚನ್ನರಾಯಪಟ್ಟಣ ಪುರಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಸಭೆ ನಡೆಸಲು ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಸೂಚನೆ ಮೇರೆಗೆ ಪುರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಅವಕಾಶ ನೀಡಲಿಲ್ಲ ಎಂದು ಪುರಸಭೆ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್, ಸುಜಾತಾ, ಫರಹಾನ್ ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ ಎಂದರು.

ಸಂಸದರು ಮಧ್ಯಾಹ್ನ 3 ಗಂಟೆಗೆ ಪುರಸಭೆಗೆ ಬಂದಾಗ, ಶಾಸಕರ ಸೂಚನೆಯಂತೆ ನಾನು ಹಾಗೂ ಆಯುಕ್ತರು ಹೂ ಗುಚ್ಛ ನೀಡಿ ಸ್ವಾಗತಿಸಿದ್ದೇವೆ. ನಂತರ ಅಧ್ಯಕ್ಷರ ಕೊಠಡಿಯಲ್ಲಿ ಸಭೆ ನಡೆಸಲು ಸಂಸದರೇ ಹೇಳಿದರು. ಆದರೆ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋಪಾಲಸ್ವಾಮಿ ಅವರು ಸಭಾಂಗಣದಲ್ಲಿ ಸಂಸದರೊಂದಿಗೆ ಸಭೆ ನಡೆಸಬೇಕು ಎಂಬ ಹಟದಿಂದ ಈ ರೀತಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಕರಣ ಸಂಬಂಧ ಆರೋಪ ಮಾಡಿರುವ ಪ್ರಕಾಶ್ ಅವರು, ಅರ್ಜಿ ಪ್ರಕಾಶ್ ಎಂದೇ ಪ್ರಖ್ಯಾತರಾಗಿದ್ದಾರೆ. ಪುರಸಭೆಯಲ್ಲಿ ನಡೆಯಬೇಕಾದ ಯಾವುದೇ ಕಾಮಗಾರಿಗಳಿಗೂ ವಿರೋಧಿಸಿ ಅರ್ಜಿ ಹಾಕುವುದೇ ಅವರ ಕಾಯಕವಾಗಿದ ಎಂದು ದೂರಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಎಚ್.ಸಿ. ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.