ADVERTISEMENT

ನಾಲ್ವರಿಗೆ ಜೀವಾವಧಿ ಶಿಕ್ಷೆ

ವಾಹನ ಹಾಯಿಸಿ ದಂಪತಿ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 13:07 IST
Last Updated 23 ಆಗಸ್ಟ್ 2021, 13:07 IST

ಚನ್ನರಾಯಪಟ್ಟಣ: ಆಸ್ತಿ ವಿವಾದ ಮತ್ತು ದ್ವೇಷದ ಹಿನ್ನೆಲೆಯಲ್ಲಿ ಟಾಟಾ ಸುಮೋ ವಾಹನ ಹಾಯಿಸಿ ದಂಪತಿ ಕೊಲೆ ಮಾಡಿದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮತ್ತು ದಂಡವನ್ನು ಸೋಮವಾರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಎನ್.ಸಂಶಿ ತೀರ್ಪು ನೀಡಿದ್ದಾರೆ.

ಅದೇ ಗ್ರಾಮದ ಲತೇಶ, ಈತನ ತಂದೆ ಜಗದೀಶ್, ನಾಗರಾಜ ಮತ್ತು ಸಾತೇನಹಳ್ಳಿಯ ದೀಪಕ್ ಶಿಕ್ಷೆಗೊಳಗಾದ ಅಪರಾಧಿಗಳು. ಇವರೆಲ್ಲರೂ ಸೇರಿ ಅರಸೀಕೆರೆ‌ ರಸ್ತೆ ಊಪಿನಹಳ್ಳಿ ಗೇಟ್ ‌ಬಳಿ ಟಾಟಾ‌ ಸುಮೊ ಹಾಯಿಸಿ ಬ್ಯಾಡರಹಳ್ಳಿಯ ಮೋಹನಕುಮಾರ್ ಮತ್ತು ಪವಿತ್ರಾ ಅವರನ್ನು ಕೊಲೆ ಮಾಡಿದ್ದರು.

ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ಇದ್ದುದ್ದರಿಂದ 2015 ಜೂನ್ 17ರಂದು ಚನ್ನರಾಯಪಟ್ಟಣದ ನ್ಯಾಯಾಲಯಕ್ಕೆ ಮೋಹನಕುಮಾರ್ ಮತ್ತು ಪವಿತ್ರಾ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಟಾಟಾ ಸುಮೋದಲ್ಲಿ ಬಂದ ಲತೇಶ್ ಮತ್ತು ದೀಪಕ್ ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಗುದ್ದಿಸಿದಾಗ ಮೋಹನಕುಮಾರ ಮತ್ತು ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದರು.

ADVERTISEMENT

ಆರೋಪಿ ನಾಗರಾಜನ ಪತ್ನಿ ಮತ್ತು ಕೊಲೆಯಾದ ಮೋಹನಕುಮಾರ ಅವರ ಪತ್ನಿ ಪವಿತ್ರಾ ಸಹೋದರಿಯರು. ಆಸ್ತಿಗಾಗಿ ನಾಗರಾಜ ತನ್ನ ಪತ್ನಿಯ ಮೂಲಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರು. ಮೋಹನಕುಮಾರ, ಪವಿತ್ರಾ ಅವರನ್ನು ಕೊಲೆ ಮಾಡಿಸಿದರೆ ಅತ್ತೆ ಮನೆಯ ಆಸ್ತಿ ನನಗೆ ಸೇರುತ್ತದೆ ಎಂಬ ದುರುದ್ದೇಶದಿಂದ ದಂಪತಿಯನ್ನು ಕೊಲೆ ಮಾಡಿಸಲು ನಾಗರಾಜ ಸಂಚು ರೂಪಿಸಿದ್ದ.

ತನ್ನ ತೋಟದ ಕೆಲಸಕ್ಕೆ ಬರುತ್ತಿದ್ದ ಲತೇಶ ಮತ್ತು ಜಗದೀಶನೊಂದಿಗೆ ಸೇರಿಕೊಂಡು ಊರಿನಲ್ಲಿ ಆಗಾಗ ಮೋಹನಕುಮಾರನ ಜೊತೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ನಿಮ್ಮನ್ನು ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದ. ಮತ್ತೊಬ್ಬ ಆರೋಪಿ ದೀಪಕ್‍ಗೆ ಸೇರಿದ ಟಾಟಾ ಸುಮೋವನ್ನು ಕೊಲೆ ಮಾಡಲು ಬಳಸಿಕೊಳ್ಳಲಾಗಿದೆ.

ಟಾಟಾ ಸುಮೊದಿಂದ ಗುದ್ದಿಸಿ ಸಾಯಿಸಿದರೆ ಅಪಘಾತದ ಪ್ರಕರಣ ಎಂದು ಮುಚ್ಚಿ ಹಾಕಬಹುದು ಎಂದು ತಿಳಿದು ಈ ಕೃತ್ಯ ಎಸಗಿದ್ದರು.

ಎಎಸ್ಪಿ ಭೀಮಾಶಂಕರ್ ಗುಳೇದ್, ಪಿಎಸ್‍ಐ ಜಯಕೃಷ್ಣ ತನಿಖೆ ನಡೆಸಿ ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ನಾಲ್ವರು ಅಪರಾಧಿಗಳಿಗೆ ತಲಾ ₹ 25 ಸಾವಿರ ದಂಡ ವಿಧಿಸಲಾಗಿದೆ. ದೀಪಕ್‌ಗೆ ನಕಲಿ ಚೆಕ್ ನೀಡಿದ ಆರೋಪದ ಮೇರೆಗೆ ನಾಗರಾಜನಿಗೆ ₹ 45 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ಮೋಹನಕುಮಾರ, ಪವಿತ್ರಾ ಅವರ ಇಬ್ಬರು ಮಕ್ಕಳಿಗೆ ತಲಾ ₹ 35 ಸಾವಿರ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಕೆ.ಎಸ್. ನಾಗೇಂದ್ರ, ಬಿ.ನಾಗಸುಂದ್ರಮ್ಮ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.