ಹಾಸನ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಹಿಳೆಯ ಪತಿಯನ್ನು ಸಕಲೇಶಪುರ ತಾಲ್ಲೂಕು ವಿನಾಯಕ ಎಸ್ಟೇಟ್ ನಲ್ಲಿ ಕೊಂದು ಹೂತು ಹಾಕಿದ್ದ ಮೂವರಿಗೆ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಮರಗೂರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಕಾಕನಮನೆ ಗ್ರಾಮದ ಸೆಲ್ವದೊರೈ ಜಾಕಿಚಾನ್ ಕೊಲೆಗೀಡಾದ ವ್ಯಕ್ತಿ. ಮೋಹನ, ಚಂದ್ರಶೇಖರ, ಆರ್. ಗಣೇಶ ಶಿಕ್ಷೆಗೆ ಒಳಪಟ್ಟ ಅಪರಾಧಿಗಳು. ಪ್ರಕರಣಕ್ಕೆ ಕುಮ್ಮಕು ನೀಡಿದ ಆರೋಪ ಹೊತ್ತಿದ್ದ ನಾಲ್ಕನೇ ಆರೋಪಿ ಅಂಬಿಕ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.
ಕಾಕನಮನೆ ಗ್ರಾಮದ ಸೆಲ್ವದೊರೈ ಜಾಕಿಚಾನ್ ಅವರನ್ನು ಅಂಬಿಕಾ ಜತೆ ಮದುವೆ ಮಾಡಲಾಗಿತ್ತು. ಪತಿ ಕೆಲಸದ ನಿಮಿತ್ತ ಹೊರ ಹೋದಾಗ ಅಂಬಿಕಾ ಅವರು ಮೋಹನ, ಚಂದ್ರಶೇಖರ, ಆರ್. ಗಣೇಶ ಜತೆ ಅಕ್ರಮ ಸಂಬಂಧ ಹೊಂದಿದ್ದರು. ವಿಷಯ ತಿಳಿದ ಪತಿ ಮೂವರ ಜತೆ ಜಗಳ ಮಾಡಿದ್ದರು ಎನ್ನಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಎಂಬ ಕಾರಣಕ್ಕೆ ಅಂಬಿಕಾ 2013ರ ಅ. 25ರಂದು ಮೂವರನ್ನು ತನ್ನ ಮನೆಗೆ ಕರೆಯಿಸಿಕೊಂಡು ಕೊಲೆಗೆ ಕುಮ್ಮಕ್ಕು ನೀಡಿದ್ದರು. ಅದರಂತೆ ಮೂವರು ಸೆಲ್ವದೊರೈನನ್ನು ವಿನಾಯಕ ಎಸ್ಟೇಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಮಚ್ಚು, ಕತ್ತಿಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ಶವವನ್ನು ತೋಟದಲ್ಲಿ ಹೂತು ಹಾಕಿದ್ದರು.
ಸಕಲೇಶಪುರ ಗ್ರಾಮಾಂತರ ಸಬ್ ಇನ್‌ಸ್ಪೆಕ್ಟರ್ ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ, ಹಾಗೂ ₹ 10 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಮೃತನ ಮಕ್ಕಳಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಲಾಗಿದೆ. ಅಭಿಯೋಜಕ ಕೃಷ್ಣ ಜಿ ದೇಶಭಂಡಾರಿ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.